ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ 351 ಹುದ್ದೆ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇಲಾಖೆ ನೇಮಕಾತಿಯ ತಾತ್ಕಾಲಿಕಪಟ್ಟಿ ಸಿದ್ದಪಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದ್ದು, ಆಕ್ಷೇಪಗಳಿದ್ದರೆ ಸಲ್ಲಿಸಲು ಕಾಲವಕಾಶವನ್ನು ನೀಡಲಿದೆ. ಇದಾದ ಕೆಲವೇ ದಿನಗಳಲ್ಲಿ ಹುದ್ದೆಗಳಿಗೆ ನೇಮಕಾತಿ ಪತ್ರ ವಿತರಿಸಲಿದೆ. ಆದರೆ ಏತನ್ಮಧ್ಯೆ ಉದ್ಘವಿಸಿರುವ ಮಧ್ಯವರ್ತಿಗಳು ತಾತ್ಕಾಲಿಕ ಪಟ್ಟಿಯಲ್ಲಿ ನಿಮ್ಮಹೆಸರನ್ನು ಸೇರಿಸುತ್ತೇವೆ, ಹುದ್ದೆಯಲ್ಲಿ ನಿಮ್ಮನ್ನು ಪರ್ಮನೆಂಟ್ ಮಾಡಿಸುತ್ತೇವೆ ಇಲಾಖಾ ಮಟ್ಟದ ಹಿರಿಯ ಅಧಿಕಾರಿಗಳ ಸಂಪರ್ಕವಿದ್ದು ಹುದ್ದೆ ನಿಮಗೆ ಕೊಡಿಸುತ್ತೇವೆ ಎಂದು ಆಮಿಷ ತೋರಿಸುತ್ತಿದ್ದಾರೆ. ಈ ಹುದ್ದೆಗಳಿಗೆ 50 ಸಾವಿರ ರೂಪಾಯಿಯಿಂದ ಲಾಂತರ ರೂಪಾಯಿವರೆಗೆ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ನೇಮಕಾತಿ ಜತೆಗೆ ವರ್ಗಾವಣೆ, ಮುಂಬಡ್ತಿ ವಿಷಯವಾಗಿಯೂ ಲಂಚದ ರೂಪದಲ್ಲಿ ಹಣ ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೆಲವರು ಇಂಥವರ ವಂಚನೆಯ ಬಲೆಗೆ ಸಿಲುಕಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.