ಪ್ರಜಾ ಸೇವೆ ಅಭಿಯಾನಕ್ಕೆ ಸಿದ್ದರಾಗಿ

officers meeting
officers meeting
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜನರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಜಾ ಸೇವೆ ಇಲಾಖೆ ಸ್ಥಾಪಿಸಿದ್ದು ಜಿಲ್ಲೆಯಲ್ಲಿ ಪ್ರಜಾ ಸೇವೆ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್​ ಅನುರಾಧಾ ಸೂಚನೆ ನೀಡಿದರು.
ದೇವನಹಳ್ಳಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಎಲ್ಲ ಜಿಲ್ಲೆಗಳಲ್ಲಿ ಪ್ರತಿ ತಿಂಗಳ ಎಲ್ಲ ಶನಿವಾರದಂದು ಪ್ರಜಾಸೇವೆ ಅಭಿಯಾನ ಸಭೆಗಳನ್ನು ಆಯೋಜಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ.5 ರಂದು ಪ್ರಜಾ ಸೇವೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.ಈ ಸಂದರ್ಭದಲ್ಲಿ ನಾಗರಿಕರಿಂದ ಸ್ವೀಕರಿಸಲಾಗುವ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಸಭಾ ಸ್ಥಳದಲ್ಲಿ ಸ್ಥಾಪಿಸಲಾಗುವ ಗ್ರಾಮ ಒನ್​ ಮತ್ತು ಕರ್ನಾಟಕ ಒನ್​ ಕೇಂದ್ರಗಳ ಮೂಲಕ ನಾಗರಿಕ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು. ಪ್ರಜಾ ಸೇವೆ ಅಭಿಯಾನದಂದು ವಿಲೇವಾರಿಗೆ ನಾಗರಿಕರು ಮೊದಲ ಬಾರಿಗೆ ದಾಖಲಿಸುತ್ತಿರುವ ದೂರುಗಳು ಒಂದು ಸರದಿ, ಇತ್ಯರ್ಥವಾಗದ ದೂರುಗಳು ಪೋರ್ಟಲ್​ನಲ್ಲಿ ಈಗಾಗಲೇ ದಾಖಲಾಗಿದ್ದು, ವಿಲೇವಾರಿಗೆ ನಿಗದಿಪಡಿಸಿದ ಗರಿಷ್ಟ 21 ದಿನಗಳ ಅವಧಿ ಮುಗಿದ ನಂತರವೂ ಯಾವುದೇ ಪ್ರತಿಕ್ರಿಯೆ ಅಥವಾ ತೃಪ್ತಿಕರ ಪ್ರತಿಕ್ರಿಯೆ ಬಂದಿರದ ದೂರುಗಳಿಗೆ ಇನ್ನೊಂದು ಸರದಿ ಮಾಡಲಾಗುತ್ತದೆ ಎಂದರು.
ಸದುಪಯೋಗ ಮಾಡಿಕೊಳ್ಳಬೇಕು:
ಪ್ರಜಾ ಸೇವಾ ಅಭಿಯಾನ ಆಯೋಜಿಸುವ ದಿನದಂದು ವಿವಿಧ ಇಲಾಖೆಗಳ ಸ್ಟಾಲ್​ ಳನ್ನು ನಿರ್ಮಿಸಿ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ ಸಾರ್ವಜನಿಕರು ಪ್ರಜಾ ಸೇವಾ ಅಭಿಯಾನದ ದಿನದಂದು ಕುಂದು ಕೊರತೆ ಅಹವಾಲುಗಳನ್ನು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ, ಇತ್ಯರ್ಥ ನಮ್ಮ ಕರ್ತವ್ಯವಾಗಿದ್ದು ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಜಾ ಸೇವಾ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡಬಳ್ಳಾಪುರ ಪರಿಶೀಲನೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳು ತೀವ್ರ ಬರ ಹಾಗೂ ದೇವನಹಳ್ಳಿ ತಾಲೂಕು ಮಧ್ಯಮ ಬರ ತಾಲೂಕುಗಳೆಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಪರಿಶೀಲಿಸಿ ವರದಿ ನೀಡಲಾಗುವುದು. ಜಿಲ್ಲೆಯ ಬರ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಶಾಲೆ, ಹಾಸ್ಟೆಲ್​ ಗಳಿಗೆ ಭೇಟಿ ನೀಡಿ:
ಸರ್ಕಾರಿ ಶಾಲೆಗಳು, ವಸತಿ ನಿಲಯಗಳು, ಹಾಸ್ಟೆಲ್​ ಗಳಿಗೆ ಅಧಿಕಾರಿಗಳು ಆಗಾಗ್ಗೆ ದಿಢೀರ್​ ಭೇಟಿ ನೀಡಬೇಕು. ಅಲ್ಲಿನ ವಾಸ್ತವ ಸ್ಥಿತಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಿ. ಆಸ್ಪತ್ರೆಗಳಿಗೂ ಅಧಿಕಾರಿಗಳು ದಿಢೀರ್​ ಭೇಟಿ ನೀಡಿ ಎಂದ ಜಿಲ್ಲಾಧಿಕಾರಿ ಇ-ಖಾತೆ, ಪಹಣಿ ಸೃಜಿಸಬೇಕಾದ ಶಾಲೆಗಳ ಮಾಹಿತಿ ನೀಡಿ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಅಂಗನವಾಡಿ ಕಟ್ಟಡಗಳು, ವಸತಿ ನಿಲಯಗಳು ವಿವರ, ಎಷ್ಟು ಅಂಗನವಾಡಿಗಳಿಗೆ ನಿವೇಶನ ಅವಶ್ಯಕತೆ ಇದೆ ಎಂಬುದರ ಬಗ್ಗೆ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net