ಅಂತ್ಯಕ್ರಿಯೆಗೆ ಕಂದಾಯ ಅಧಿಕಾರಿಗಳ ಅಡ್ಡಿ!

Obstruction by revenue officials!
Obstruction by revenue officials!
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅರದೇಶನಹಳ್ಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಮೃತ ವ್ಯಕ್ತಿಯ ಕುಟುಂಬದವರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಹೈಡ್ರಾಮ ಸೃಷ್ಟಿಯಾದ ಪ್ರಕರಣ ನಡೆದಿದೆ.
ಏನಿದು ಪ್ರಕರಣ?
ಅರದೇಶನಹಳ್ಳಿ ಗ್ರಾಮದ ನಿವಾಸಿ ವೀರಶೈವ ಲಿಂಗಾಯಿತ ಸಮಾಜದ ನಾಗರಾಜ (42) ಎಂಬುವರು ಭಾನುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಗ್ರಾಮದ ಹೊರಭಾಗದಲ್ಲಿನ ಸಿದ್ದಪ್ಪನ ಕುಂಟೆ ಬಳಿಯಲ್ಲಿನ ವೀರಶೈವ ರುದ್ರಭೂಮಿ ಎಂದು ಹೇಳಲಾಗುವ ಜಾಗದಲ್ಲಿ ಸಿದ್ದತೆ ನಡೆಸಿದ್ದರು. ಆದರೆ ಕೆರೆಕುಂಟೆಗಳ ಬಳಿ ಅಂತ್ಯಸಂಸ್ಕಾರಕ್ಕೆ ಅವಕಾಶವಿಲ್ಲ ಎಂಬ ನಿಯಮ ಮುಂದಿಟ್ಟುಕೊಂಡು ಕಂದಾಯ ಇಲಾಖೆ ಅಧಿಕಾರಿಗಳು ಅಂತ್ಯಕ್ರಿಯೆಗೆ ಅಡ್ಡಪಡಿಸಿದರು ಎನ್ನಲಾಗಿದೆ.
ತಳ್ಳಾಟ-ನೂಕಾಟ:
ಕಂದಾಯ ಇಲಾಖಾ ಅಧಿಕಾರಿಗಳು ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡದಂತೆ ಸುಮಾರು 5 ಗಂಟೆ ಕಾಲ ತಡೆದ ಹಿನ್ನೆಲೆಯಲ್ಲಿ ಮೃತದೇಹವನ್ನಿಟ್ಟುಕೊಂಡು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಕುಟುಂಬದ ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ರಸ್ತೆ ಮಧ್ಯೆ ಶವವಿರಿಸಿ ಪ್ರತಿಭಟನೆ:
ಇದರಿಂದ ಕುಪಿತರಾದ ಕುಟುಂಬಸ್ಥರು ರಸ್ತೆಮಧ್ಯದಲ್ಲಿ ಶವವನ್ನಿಟ್ಟು ಪ್ರತಿಭಟಿಸಿದರು. ಈ ವೇಳೆ ಕಂದಾಯ ಅಧಿಕಾರಿಗಳು ಪೋಲಿಸರು ಹಾಗೂ ಅಂತ್ಯಕ್ರಿಯೆಗೆ ಬಂದಿದ್ದವರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಂಜುನಾಥ ಅವರನ್ನು ಕಳುಹಿಸಿದರು. ಸ್ಥಳಕ್ಕೆ ದೌಡಾಯಿಸಿದ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಅಂತ್ಯಕ್ರಿಯೆ ಅವಕಾಶವಿಲ್ಲ ಎಂದು ಮನವೊಲಿಸುವ ಪ್ರಯತ್ನ ನಡೆಸಿದರು. ಇದೇ ಮಳೆ ಸುರಿಯುವ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಅಧಿಕಾರಿಗಳು ಪೊಲೀಸರೊಂದಿಗೆ ವಾಪಸ್ ಮರಳಿದರು. ಬಳಿಕ ಕುಟುಂಬದವರು ಸಿದ್ದತೆ ನಡೆಸಿದ್ದ ಜಾಗದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದರು.
ಮೊದಲಿನಿಂದಲೂ ಇರುವ ಬಗ್ಗೆ ಭೂ ದಾಖಲೆಗಳಲ್ಲಿ ಸಿದ್ದಪ್ಪನಬಕುಂಟೆ ಎಂದು ಇದೆ ಕೆರೆ ಕುಂಟೆ ಗಳ ಬಳಿ ಸ್ಮಶಾನಕ್ಕೆ ಅವಕಾಶ ಕೊಡಲು ಬರುವುದಿಲ್ಲ, ಈ ಕುಂಟೆಯನ್ನು ಅಭಿವೃದ್ದಿಪಡಿಸುವ ಬಗ್ಗೆ ಪ್ರಸ್ತಾವನೆ ಇದೆ, ಹಾಗಾಗಿ ಇಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶವಿಲ್ಲ.
ಹನುಮಂತರಾಯಪ್ಪ, ಕಂದಾಯ ಇಲಾಖೆ ಅಧಿಕಾರಿ
ಮುತ್ತಾತ ಸಿದ್ದಪ್ಪ ಗ್ರಾಮದ ಒಳಿತಿಗಾಗಿ ನೀಡಿದ್ದ ಕುಂಟೆ ಇದಾಗಿದೆ. ಕುಂಟೆ ಹೊರತುಪಡಿಸಿ ಕೇವಲ 4 ಗುಂಟೆ ಜಾಗದಲ್ಲಿ ವೀರಶೈವ ಲಿಂಗಾಯಿತರು 40 ವರ್ಷಗಳಿಂದ ಇಲ್ಲಿಯೇ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದೇವೆ. ಆದರೆ ರಾಜಕೀಯ ಪ್ರೇರಿತ ಒತ್ತಡಗಳಿಂದ ಅಧಿಕಾರಿಗಳು ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ನಾಗೇಶ, ಮೃತನ ಸಂಬಂಧಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net