ಈಗಾಗಲೇ ಎಲ್ಲೆಂದರಲ್ಲಿ ಕಸ ಎಸೆಯುವ ಕೋಳಿ ಮಾಂಸದ ಅಂಗಡಿ, ಮದ್ಯಮಾರಾಟ ಮಳಿಗೆ ಸೇರಿ ಹಲವು ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ಇದೇ ಪ್ರವೃತ್ತಿ ಮುಂದುವರೆದರೆ ದಂಡದ ಜತೆಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕನಸವಾಡಿ ಪಂಚಾಯಿತಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿ ಕನಸವಾಡಿ ಪಂಚಾಯಿತಿ ವ್ಯಾಪ್ತಿಯ (ಮಧುರೆ ಕ್ರಾಸ್-ದೊಡ್ಡಬೆಳವಂಗಲ ಮಾರ್ಗ) ಮಧುರೆ ಕೆರೆ ಅಂಗಳದಲ್ಲಿ ಶೇಕರಣೆಯಾಗಿದ್ದ ತ್ಯಾಜ್ಯ ರಾಶಿಯನ್ನು ಸ್ವಚ್ಛಗೊಳಿಸಿರುವ ಪಂಚಾಯಿತಿ ಸಿಬ್ಬಂದಿ ಹೀಗೊಂದು ಕಡೆಯ ಎಚ್ಚರಿಕೆ ನೀಡಿದೆ. ಕರೆಯಂಗಳದ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಅಪರಾಧ. ಈ ಹಿನ್ನೆಲೆಯಲ್ಲಿ ಈಗಾಗಲೇ ನೋಟಿಸ್‌ಗಳನ್ನು ನೀಡಿ ಜಾಗೃತಿ ಮೂಡಿಸಲಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ನೋಟಿಸ್ ನೀಡಿರುವ ಮಳಿಗೆಗಳಿಗೆ ದಂಡ ವಿಧಿಸಲಾಗುತ್ತದೆ ಜತೆಗೆ ಕಾನೂನು ಕ್ರಮಕ್ಕೆ ಶಿಾರಸು ಮಾಡಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಸಮಸ್ಯೆ ಜ್ವಲಂತ:
ಆಗಾಗ ಪಂಚಾಯಿತಿ ವತಿಯಿಂದ ಈ ಭಾಗದಲ್ಲಿ ಕಸದರಾಶಿ ತೆರವುಗೊಳಿಸಿ ಸ್ವಚ್ಛ ಮಾಡಲಾಗುತ್ತದೆ, ಆದರೆ ಕೆಲವೇ ದಿನಗಳಲ್ಲಿ ಮತ್ತೆ ಕಸ ಶೇಖರಣೆಯಾಗಿ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಬೇಸತ್ತ ಪಂಚಾಯಿತಿ ನೋಟಿಸ್‌ಗಳನ್ನು ನೀಡಿ ಎಚ್ಚರಿಕೆ ನೀಡಿದೆ. ಕಡೆಯದಾಗಿ ದಂಡ ಪ್ರಯೋಗದ ಜತೆಗೆ ಕಾನೂನು ಕ್ರಮಕ್ಕೆ ಮುಂದಾಗಿದೆ.
ವರದಿ ಪರಿಣಾಮ:
‘ಮದ್ಯದಂಗಡಿ ತ್ಯಾಜ್ಯ ವಿಲೇಗೆ ಕೆರೆಯೇ ಆಸರೆ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಪಂಚಾಯಿತಿ ಜೆಸಿಬಿ ಮೂಲಕ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ ಮದ್ಯದಂಡಿ ಸೇರಿ ಕೋಳಿತ್ಯಾಜ್ಯದ ಅಂಗಡಿಗಳಿಗೆ ನೋಟಿಸ್ ನೀಡಿತ್ತು. ಕೆಲವು ದಿನಗಳ ಬಳಿಕ ಮತ್ತೆ ಇದೇ ಭಾಗದಲ್ಲಿ ಕಸ ಎಸೆಯುತ್ತಿರುವ ಬಗ್ಗೆ ಮತ್ತೊಮ್ಮೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯಂಗಳ ಸ್ವಚ್ಛಗೊಳಿಸಿರುವ ಪಂಚಾಯಿತಿ ನೋಟಿಸ್ ನೀಡಿರುವ ಮಳಿಗೆಗಳ ಮೇಲೆ ದಂಡಪ್ರಯೋಗಕ್ಕೆ ಮುಂದಾಗಿದೆ.