ಗ್ರಾಮೀಣ ಪ್ರದೇಶಗಳಲ್ಲಿ ಆಡಲು ಜಾಗವೇ ಇಲ್ಲದಂತಾಗಿ ಮಕ್ಕಳು ಮೊಬೈಲ್‌ನತ್ತ ಮುಖ ಮಾಡುತ್ತಿದ್ದಾರೆ, ಸರ್ಕಾರವೇನೋ ಮಕ್ಕಳನ್ನು ಮೊಬೈಲ್ ಬಳಸದಂತೆ ಆದೇಶ ಹೊರಡಿಸಲು ಸಿದ್ದವಾಗುತ್ತಿದ್ದಾರೆ ಆದರೆ ಮಕ್ಕಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲು ಉದಾಸೀನ ಮಾಡುತ್ತಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಜನಸಂಖ್ಯಾ ಸ್ಫೋಟ, ಕೃಷಿ ಭೂಮಿಯ ಬಳಕೆ, ನಿರ್ವಹಣೆಯ ಕೊರತೆ ಮತ್ತು ಕಂದಾಯ ಇಲಾಖೆ-ಪಂಚಾಯತ್ ನಡುವಿನ ಜಟಾಪಟಿಯಿಂದಾಗಿ ಹಳ್ಳಿಗಳಲ್ಲಿ ಆಟದ ಸ್ಥಳಗಳು ಕಡಿಮೆಯಾಗುತ್ತಿವೆ, ಇದರಿಂದಾಗಿ ಮಕ್ಕಳು ರಸ್ತೆ ಅಥವಾ ಅಸುರಕ್ಷಿತ ಸ್ಥಳಗಳಲ್ಲಿ ಆಡುವಂತಾಗಿದೆ. ಒಲಂಪಿಕ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪದಕ ನಿರೀಕ್ಷಿಸುವ ಜನನಾಯಕರು, ಆಡಳಿತಗಾರರು ಮೂಲ ಸೌಕರ್ಯವಾದ ಆಟದ ಮೈದಾನ, ಉಪಕರಣಗಳನ್ನು ಪೂರೈಸುವಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬುದು ಗ್ರಾಮೀಣ ಭಾಗದ ಕ್ರೀಡಾಪಟುಗಳ ಆರೋಪವಾಗಿದೆ.