ಜಾಲಿರೈಡ್‌ಗೆ ಮತ್ತೆ ಐವರು ಬಲಿ

nelamangala accident
nelamangala accident
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾವಾಂತರ
ಹೊಸಕೋಟೆ ಸರಣಿ ಅಪಘಾತದಲ್ಲಿ ಏಳು ಮಂದಿ ದಾರುಣವಾಗಿ ಬಲಿಯಾದ ಬೆನ್ನಲ್ಲೆ ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ನೆಲಮಂಗಲದ ಜಿಂದಾಲ್ ಸಮೀಪದಲ್ಲಿ ಸಂಭವಿಸಿದ ಮತ್ತೊಂದು ಭೀಕರ ಅಪಘಾತದಲ್ಲಿ ಐವರು ಬಲಿಯಾಗಿದ್ದಾರೆ.
ದೊಡ್ಡಬಳ್ಳಾಪುರ ನಿವಾಸಿಗಳು : ಮೃತರನ್ನು ದೊಡ್ಡಬಳ್ಳಾಪುರದ ಬಸವ ಭವನ ಸಮೀಪದ ನಿವಾಸಿ ಲಲಿತ್ (22), ತಿಪ್ಪಾಪುರದ ಸಿ.ಹರ್ಷಿತ್ (20), ದೇವರಾಜ ನಗರದ ದುರ್ಗಾಪ್ರಸಾದ್ (20), ಕರೇನಹಳ್ಳಿ ಧನುಷ್ (19), ಕಲ್‌ಪೇಟೆ ನಿವಾಸಿ ಕೇಶವ್ (19) ಎಂದು ಗುರುತಿಸಲಾಗಿದೆ.
ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ
ನೆಲಮಂಗಲದ ಜಿಂದಾಲ್ ಸಮೀಪ ಡಿವೈಡರ್ ಹಾರಿದ ಕಾರು ಮುಂದೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಭೀಕರತೆಗೆ ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗುಟುಕು ಜೀವ ಉಳಿಸಿಕೊಂಡಿದ್ದ ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯುವ ವಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.
ಬಸ್‌ಗೆ ಅಪ್ಪಳಿಸಿದ ಇಂಡಿಕಾ ಕಾರು
ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ *ಇಂಡಿಕಾ ಕಾರು, ಬೆಂಗಳೂರಿನಿಂದ ತುಮಕೂರಿನತ್ತ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿವೈಡರ್ ಹಾರಿ ಡಿಕ್ಕಿಯಾಗಿದೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಿದ್ದು, ವಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷ ಪದವಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ತಾಯಿ ಆಕ್ರಂದನ
ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್‌ನ ತಾಯಿ ಆಕ್ರಂದನ ಮುಗಿಲು ಮುಟ್ಟಿದ್ದು, ಮಗನನ್ನು ಕಳೆದುಕೊಂಡ ತಾಯಿ ಗೋಳಾಟ ಮನಕಲುಕುವಂತಿತ್ತು. ಹರ್ಷಿತ್ (ಶನಿವಾರ) ರಾತ್ರಿ 8.30ಕ್ಕೆ ಗೆಳೆಯರನ್ನು ಭೇಟಿ ವಾಡಿ ಬರುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಎಲ್ಲರೂ ಸ್ನೇಹಿತರು
ಮೃತಪಟ್ಟ ಎಲ್ಲರೂ ಸ್ನೇಹಿತರಾಗಿದ್ದು, ರಾತ್ರಿ ಲಾಂಗ್ ಡ್ರೈವ್‌ಗಾಗಿ ಕಾರಿನಲ್ಲಿ ಹೊರಟಿದ್ದರು. ಇದರಲ್ಲಿ ಬಹುತೇಕರು ಮನೆಯಲ್ಲಿ ತಿಳಿಸದೆಯೇ ಜಾಲಿ ರೈಡ್‌ಗೆ ಬಂದಿದ್ದರು ಎನ್ನಲಾಗಿದೆ.
ಬಸ್ ಚಾಲಕನಿಗೆ ಗಾಯ:
ಅಪಘಾತದಲ್ಲಿ ಕೆಸ್ಸಾರ್ಟಿಸಿ ಬಸ್ ಚಾಲಕ ಸೇರಿ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಭಯಾನಕ ಸದ್ದು ಕೇಳಿಸಿತು:
ಜಿಂದಾಲ್ ಬಳಿ ಸಂಭವಿಸಿದ ಬಸ್ ಮತ್ತು ಕಾರು ನಡುವಿನ ಅಪಘಾತದ ಭೀಕರತೆ ಬಗ್ಗೆ ಕೆಸ್ಸಾರ್ಟಿಸಿ ಬಸ್ ಚಾಲಕ ಕೆಂಪರಾಜು ಮಾಹಿತಿ ನೀಡಿದ್ದಾರೆ. ಕಾರು ಅತಿ ವೇಗದಲ್ಲಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಾಗ ಭಯಾನಕ ಸದ್ದು ಕೇಳಿಸಿತು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಅಪಘಾತದ ತೀವ್ರತೆಗೆ ಬಸ್‌ನ ಗಾಜುಗಳು ಒಡೆದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು ಪ್ರಯಾಣಿಕರೆಲ್ಲರೂ ಗಾಬರಿಯಿಂದ ಜೋರಾಗಿ ಕಿರುಚತೊಡಗಿದರು. ಬಸ್‌ನಲ್ಲಿ 43 ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೀಡಾದ ನಂತರ, ಪ್ರಯಾಣಿಕರನ್ನು ಹುಬ್ಬಳ್ಳಿಗೆ ತೆರಳುತ್ತಿದ್ದ ಸಂಸ್ಥೆಯ ಬೇರೆ ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು ಎಂದು ತಿಳಿಸಿದ್ದಾರೆ.
ಮಕ್ಕಳ ಶವದ ಎದುರು ಪಾಲಕರ ಕಣ್ಣೀರು:
ಪಿಯುಸಿ ಮುಗಿಸಿಕೊಂಡು ಕೆಲಸ ಮಾಡಿಕೊಂಡಿದ್ದ ಮಗ ಹತ್ತೇ ನಿಮಿಷದಲ್ಲಿ ಹೊರಗೆ ಹೋಗಿ ಬರುತ್ತೀನಿ ಅಂತಾ ಹೋದವನು ಶವವಾಗಿದ್ದಾನೆ. ಒಂದೊಂದೇ ಮಕ್ಕಳಿರೋ ನಾವು ಏನು ಮಾಡಬೇಕು ಎಂದು ಒಬ್ಬನೇ ಮಗನನ್ನು ಕಳೆದುಕೊಂಡ ದುರ್ಗಾ ಪ್ರಸಾದ್ ತಾಯಿ ಮಂಜುಳಾ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ದಯವಿಟ್ಟು ಯಾವ ಮಕ್ಕಳು ಈ ರೀತಿ ಮಾಡಿಕೊಳ್ಳಬೇಡಿ ಎಂದು ದುರ್ಗಾಪ್ರಸಾದ್ ತಂದೆ ಗುರುರಾಜ್ ಎಲ್ಲರಿಗೂ ಕೈ ಮುಗಿದು ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಪುನೀತ್‌ರಾಜ್‌ಕುಮಾರ್ ಟ್ಯಾಟು ಇದೆಯಾ?
ಬೆಳಗ್ಗೆ ಅಪಘಾತದ ಬಗ್ಗೆ ಫೋನ್ ಬಂದಾಗ ಮಗನ ಕೈ ಮೇಲೆ ಪುನೀತ್ ರಾಜ್‌ಕುಮಾರ್ ಟ್ಯಾಟೂ ಇದೆಯಾ ಅಂತ ಕೇಳಿದೆ. ಟ್ಯಾಟೂ ಇತ್ತು ಅಂತ ಆ ಕಡೆಯಿಂದ ಹೇಳಿದಾಗ ಬರಸಿಡಿಲು ಬಡಿದಂತಾಯ್ತು. 17 ವರ್ಷಕ್ಕೆ ನಮ್ಮನ್ನೆಲ್ಲ ಬಿಟ್ಟುಹೋಗ್ತಾನೆ ಅಂತಾ ಊಹಿಸಿರಲಿಲ್ಲ ಎಂದು ಧನುಷ್ ತಂದೆ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ದೇವಸ್ಥಾನಕ್ಕೆ ಹೋಗ್ತಿನಿ ಅಂದಿದ್ದ:
ಬಿಕಾಂ ಮುಗಿಸಿ ಸಿಸಿಟಿವಿ ಕ್ಯಾಮೆರಾ ರಿಪೇರಿ ಕೆಲಸ ಮಾಡಿಕೊಂಡಿದ್ದ. ದೇವಸ್ಥಾನಕ್ಕೆ ಹೋಗಿ ಬರ್ತಿನಿ ಅಂತ ಹೇಳಿ ಹೊರಟಿದ್ದ ಆದರೆ ನಮಗೆ ಮಗನ ಸಾವಿನ ಸುದ್ದಿ ಕೇಳಿವಂತಾಯಿತು ಎಂದು ಮಗ ಲಲಿತ್ ಅವರ ತಾಯಿ ಮಗನ ಮುಖ ದೃಷ್ಟಿಸುತ್ತಾ ಕಣ್ಣೀರು ಸುರಿಸುತ್ತಿದ್ದರು.
ಇತ್ತೀಚಿಗೆ ಕಾರು ಖರೀದಿಸಿದ್ದ:
ಇತ್ತೀಚೆಗಷ್ಟೇ ಲಲಿತ್ ಸೆಕೆಂಡ್ ಹ್ಯಾಂಡ್ ಟಾಟಾ ಇಂಡಿಕಾ ಕಾರು ಖರೀದಿಸಿದ್ದ, ಗೆಳೆಯರೊಂದಿಗೆ ರಾತ್ರಿ ಹೊರಗೆ ಸುತ್ತಾಡಿಕೊಂಡು ಬರಲು ಹೊರಟಿದ್ದ. ಆದರೆ ವಿಧಿಯಾಟಕ್ಕೆ ಬಲಿಯಾಗುವಂತಾಯಿತು ಎಂದು ಸಂಬಂಧಿಕರು ಬೇಸರ ತೋಡಿಕೊಳ್ಳಲುತ್ತಿದ್ದರು.
ಸಂಚಾರಿ ಸಿಕ್ಕು:
ತಡರಾತ್ರಿಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು ತುಮಕೂರು ರಸ್ತೆ ಹಾಗೂ ತುಮಕೂರು-ಬೆಂಗಳೂರು ಎರಡು ರಸ್ತೆಯಲ್ಲೂ ಸಂಚಾರಿ ಸಿಕ್ಕು ಏರ್ಪಟ್ಟಿತ್ತು. ವಾದನಾಯಕನಹಳ್ಳಿ ಪೊಲೀಸರು ದಟ್ಟಣೆ ನಿಯಂತ್ರಿಸಿ ವಾಹನ ಸಂಚಾರಕ್ಕೆ ಅನುವು ವಾಡಿಕೊಟ್ಟರು.
ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಮದ್ಯಸೇವೆ ವಾಡಿರಬಹುದು ಎಂಬ ಸಂಶಯದ ಹಿನ್ನೆಲೆಯಲ್ಲಿ ರಕ್ತವನ್ನು ಎಫ್‌ಎಲ್‌ಸಿಗೆ ಕಳಿಸಲಾಗಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟಗಾಯವಾಗಿದೆ. ವಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರೆಸಲಾಗಿದೆ.
ಕಾರ್ತಿಕ್ ರೆಡ್ಡಿ, ಬೆಂಗಳೂರು ಪೊಲೀಸ್ ಜಂಟಿ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net