ರಸ್ತೆ ಅಗೆದರೂ ಸೂಚನಾ ಫಲಕ ಹಾಕಲು ನಿರ್ಲಕ್ಷ್ಯ

 ನೆರಳೂರಿನ ಪೆಟ್ರೋಲ್​ ಬಂಕ್​ನಿಂದ ರಸ್ತೆ ಬದಿಯಲ್ಲಿ ಅಗೆದು ಸೂಚನಾ ಫಲಕ ಅಳವಡಿಸದಿರುವುದು.
ನೆರಳೂರಿನ ಪೆಟ್ರೋಲ್​ ಬಂಕ್​ನಿಂದ ರಸ್ತೆ ಬದಿಯಲ್ಲಿ ಅಗೆದು ಸೂಚನಾ ಫಲಕ ಅಳವಡಿಸದಿರುವುದು.
Published on

ರಸ್ತೆ ಅಗೆದರೂ ಸೂಚನಾ ಫಲಕ ಹಾಕಲು ನಿರ್ಲಕ್ಷ್ಯ

ವಾಹನ ಸವಾರರು ಎಚ್ಚರ ತಪ್ಪಿದರೆ ಪ್ರಾಣಕ್ಕೇ ಕುತ್ತು - ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಿಡಿ

ಆನೇಕಲ್​:ಅತ್ತಿಬೆಲೆ ಮತ್ತು ಚಂದಾಪುರ ಹೆದ್ದಾರಿಅಭಿವೃದ್ಧಿ ಕಾಮಗಾರಿಯಲ್ಲಿ ಬರೀ ಎಡವಟ್ಟುಗಳೇ ನಡೆಯುತ್ತಿದೆ.
ಪ್ರತಿದಿನ ಟ್ರಾಫಿಕ್​ ಸಮಸ್ಯೆಯಿಂದ ಬಸವಳಿದಿರುವ ವಾಹನ ಸವಾರರಿಗೆ ಈಗ ಮತ್ತೊಂದು ಭಯ ಎದುರಾಗಿದೆ.
ನೆರಳೂರಿನ ಪೆಟ್ರೋಲ್​ ಬಂಕ್​ನಿಂದ ರಸ್ತೆ ಬದಿಯಲ್ಲಿ ಅಗೆದು ಸುರಕ್ಷತಾ ಲಕ ಅಳವಡಿಸದೇ ಗುತ್ತಿಗೆದಾರರು ಬೇಜವಾಬ್ದಾರಿ ತೋರಿದ್ದಾರೆ.
ಈಗಾಗಲೇ ಹಳೇ ಚಂದಾಪುರದ ಬಳಿ ರಸ್ತೆ ಕುಸಿದು ಅವಾಂತರವೇ ಸೃಷ್ಟಿಯಾಗಿದ್ದನ್ನು ಮರೆಯುವಂತಿಲ್ಲ. ಈಗ ರಸ್ತೆ ಪಕ್ಕದಲ್ಲಿ ಆಳೆತ್ತರ ಅಗೆದು ಹಾಗೆ ಬಿಟ್ಟಿದ್ದಾರೆ. ಕಿಲೋಮೀಟರ್​ ಗಟ್ಟಲೆ ತೆರೆದ ಗುಂಡಿ ಇರುವುದರಿಂದ ರಾತ್ರಿ ಸಂಚಾರ ಮಾಡುವವರು ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವುದಂತೂ ನಿಶ್ಚಿತ.
ರಸ್ತೆ ಪಕ್ಕದಲ್ಲಿ ಅಗೆದು ಕಂಬಿಗಳನ್ನು ಬಿಟ್ಟಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಂಬಿಗಳಿಗೆ ಸಿಕ್ಕಿ ಬೀಳುವ ಸಾಧ್ಯತೆಯೂ ಕೂಡ ಹೆಚ್ಚಿದೆ. ಕನಿಷ್ಠ ವಾಹನ ಸವಾರರಿಗೆ ಗೊತ್ತಾಗುವ ಹಾಗೆ ಸೂಚನಾ ಫಲಕ ಅಥವಾ ಲೈಟ್​ ಕಾಣಿಸಿದಾಗ ರಿಫ್ಲೆಕ್ಟ್​ ಆಗುವ ಫಲಕವನ್ನಾದರೂ ಹಾಕದಿರುವುದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ರ್ನಿಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅತ್ತಿಬೆಲೆಯಿಂದ ಚಂದಾಪುರದವರೆಗೆ ಪ್ರತಿದಿನ ಕಿ.ಮೀಗಟ್ಟಲೆ ಸಂಚಾರ ಸಿಕ್ಕು ಉಂಟಾಗುತ್ತದೆ. ಇದಲ್ಲದೆ, ಈಗ ಅವೈಜ್ಞಾನಿಕವಾಗಿ ಪದೇಪದೆ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದು, ಸಾರ್ವಜನಿಕರ ಜೀವದ ಜತೆ ಆಟ ಆಡುತ್ತಿದ್ದಾರೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ನೆರಳೂರು ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net