ನಿಯಮ ಪಾಲನೆಗಿಲ್ಲ ಕಟ್ಟುನಿಟ್ಟು

Negligence in Prasad testing during fairs and festivals
Negligence in Prasad testing during fairs and festivals
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಾತ್ರೆ, ಉತ್ಸವಗಳಂಥ ಸಂದರ್ಭಗಳಲ್ಲಿ ವಿತರಿಸುವ ಪ್ರಸಾದ, ಅನ್ನದಾಸೋಹ ಆಹಾರವನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ಅನುಮತಿಪಡೆಯಬೇಕು ಎಂಬ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ನಡೆಯುವ ಬಹುತೇಕ ಜಾತ್ರಾ ಉತ್ಸವಗಳಲ್ಲಿ ಪಾಲನೆಯಾಗುತ್ತಿಲ್ಲ.
ಕಳೆದೆರಡು ವರ್ಷದ ಹಿಂದೆ ಹೊಸಕೋಟೆಯಲ್ಲಿ ಪ್ರಸಾದ ಸೇವನೆಯಿಂದ ನೂರಾರು ಮಂದಿ ಅಸ್ಪಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಅದೇ ರೀತಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ರಥೋತ್ಸವದ ವೇಳೆಯೂ ಪ್ರಕರಣ ವರದಿಯಾಗಿತ್ತಾದರೂ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಇದೇ ರೀತಿ ಕಳೆದೆರಡು ದಿನದ ಹಿಂದೆ ದೇವನಹಳ್ಳಿ ತಾಲೂಕಿನ ಬೆಟ್ಟೆನಹಳ್ಳಿಯಲ್ಲಿ ಅನ್ನಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದು, ಸದ್ಯ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಇಂಥ ಅವಘಡಗಳು ನಡೆಯುತ್ತಿದ್ದರೂ ಆಯೋಜಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಜಿಲ್ಲಾಡಳಿತದ ನಿಯಮಕ್ಕೆ ಕಿಮ್ಮತ್ತು ನೀಡುತ್ತಿಲ್ಲ.
ಕಟ್ಟುನಿಟ್ಟಿನ ಸೂಚನೆ ಇದೆ:
ಬೇಸಿಗೆ ಆರಂಭವಾಗಿದೆ, ಸಾಲು ಸಾಲು ಜಾತ್ರೆ, ಬ್ರಹ್ಮರಥೋತ್ಸವಗಳು ನಡೆಯುತ್ತಿವೆ, ಪ್ರಸಾದ ವಿನಿಯೋಗ, ಅನ್ನದಾಸೋಹಗಳು ನಡೆಯುತ್ತಿವೆ, ಸಂಭ್ರಮ ಮನೆ ಮಾಡುವ ಇಂಥ ಜಾತ್ರಾ ಉತ್ಸವಗಳಲ್ಲಿ ಕುಡಿವ ನೀರು, ಆಹಾರ ಸುರಕ್ಷತೆಗೆ ಬಗ್ಗೆ ಗಮನಹರಿಸಬೇಕಿದೆ ಎಂದು
ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ಬಹುತೇಕ ಕಡೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಪ್ರತೀ ವರ್ಷದಂತೆ ಈ ಬಾರಿಯೂ ಬೇಸಿಗೆ ಆರಂಭದಲ್ಲೇ ಜಾತ್ರಾ ಮಹೋತ್ಸವಗಳು ಸದ್ದು ಮಾಡುತ್ತಿದ್ದು ಉತ್ಸವಗಳ ಆಯೋಜಕರು ಅಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಹಾಗೂ ಸಂಬಂಧಿಸಿದ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಮುಂಜಾಗ್ರತಾ ಕ್ರಮ ವಹಿಸಿರುವ ಬಗ್ಗೆ ಇಲಾಖೆಗಳಿಗೆ ದೃಢೀಕರಣ ನೀಡಬೇಕು. ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಈ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು ಆಯೋಜಕರಿಗೆ ಸೂಚನೆ ರವಾನಿಸಿದ್ದಾರೆ.
ನಿಯಮಗಳೇನು?
ಸಾವಿರಾರು ಜನರು ಅನ್ನದಾಸೋಹದಲ್ಲಿ ಪಾಲ್ಗೊಳ್ಳುವುದರಿಂದ ಪ್ರಸಾದ ತಯಾರಿಸುವ ಸ್ಥಳವನ್ನು ಮುಖ್ಯವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು, ಧೂಳು, ಕಸ ಕಡ್ಡಿ ಇಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಆಹಾರ ತಯಾರಿಕೆಗೆ ಶುದ್ಧ ನೀರನ್ನೇ ಬಳಸಬೇಕು, ಶುದ್ಧ ಕುಡಿವ ನೀರನ್ನು ವಿತರಿಸಬೇಕು, ನೀರನ್ನು ಸಂಗ್ರಹಿಸುವ ಟ್ಯಾಂಕ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಸಾದ ವಿನಿಯೋಗಕ್ಕೂ ಮುನ್ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು.
ಆಂಬುಲೆನ್ಸ್, ಪ್ರಥಮ ಚಿಕಿತ್ಸೆ:
ದೊಡ್ಡ ದೊಡ್ಡ ಜಾತ್ರಾಮಹೋತ್ಸವಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸುವುದರಿಂದ ಸ್ಥಳೀಯವಾಗಿ ಕಡ್ಡಾಯವಾಗಿ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಜತೆಗೆ ಪ್ರಾಥಮಿಕ ಚಿಕಿತ್ಸೆ ನೀಡುವಂತ ವ್ಯವಸ್ಥೆ ಇರಬೇಕು, ಸ್ಥಳೀಯವಾಗಿ ವೈದ್ಯರು ಹಾಗೂ ನರ್ಸ್‌ಗಳನ್ನು ಅಲರ್ಟ್ ಮಾಡಿರಬೇಕು. ಆದರೆ ಬಹುತೇಕ ಕಡೆಗಳಲ್ಲಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅವಘಡ ಸಂಭವಿಸಿದಾದ ತಕ್ಷಣ ಆಂಬುಲೆನ್ಸ್ ಸಿಗದೆ ವೈದ್ಯಕೀಯ ಸೇವೆ ಲಭ್ಯವಾಗದೆ ಪ್ರಾಣಾಪಾಯದಂಥ ಸನ್ನಿವೇಶ ಎದುರಿಸಬೇಕಾಗಿದೆ.
ಬೆಟ್ಟೆನಹಳ್ಳಿಯಲ್ಲಿ ಅನ್ನಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಇನ್ನೆರಡು ದಿನಗಳಲ್ಲಿ ವರದಿ ಬರಲಿದ್ದು ಈ ಪ್ರಕರಣಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ. ಜಾತ್ರಾ ಮಹೋತ್ಸವಗಳಲ್ಲಿ ಜಿಲ್ಲಾಡಳಿತದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಡಾ.ಲಕ್ಕಾ ಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ
ಸಾಮಾನ್ಯವಾಗಿ ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಉತ್ಸವ, ಕಾರ್ಯಕ್ರಮಗಳಲ್ಲಿ ಪ್ರಸಾದ ವಿನಿಯೋಗ, ಅನ್ನದಾಸೋಹಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು, ಜತೆಗೆ ಅಧಿಕಾರಿಗಳ ಪರಿಶೀಲನೆ ಬಳಿಕ ವಿತರಣೆ ಮಾಡಬೇಕು, ಪ್ರಸಕ್ತ ಬೇಸಿಗೆ ವೇಳೆ ಜಿಲ್ಲೆಯಲ್ಲಿ ಸಾಲು ಸಾಲು ಉತ್ಸವಗಳು ಆರಂಭಗೊಳ್ಳಲಿದ್ದು ಆಯೋಜಕರು ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು.
ಧರ್ಮೇಂದ್ರ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net