ಹೋಬಳಿಯಲ್ಲೇ ಬಸ್‌ನಿಲ್ದಾಣಕ್ಕೆ ಗತಿಯಿಲ್ಲ

ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿ ’ನಂದಗುಡಿ’ಯಲ್ಲಿ ಪ್ರಯಾಣಿಕರ ಪರದಾಟ
ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿ ’ನಂದಗುಡಿ’ಯಲ್ಲಿ ಪ್ರಯಾಣಿಕರ ಪರದಾಟ
Published on
ಎಂ.ರಾಮೇಗೌಡ, ನಂದಗುಡಿ
ಹೊಸಕೋಟೆ ತಾಲೂಕಿನಲ್ಲಿ ಪ್ರಮುಖ ಹೋಬಳಿ ಕೇಂದ್ರವಾಗಿರುವ ನಂದುಗುಡಿಯಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರತಿನಿತ್ಯ ಪ್ರಯಾಣಿಕರು ಪರದಾಡುವಂತಾಗಿದೆ.
ಹೋಬಳಿ ವ್ಯಾಪ್ತಿಗೆ 70ಕ್ಕೂ ಹೆಚ್ಚು ಗ್ರಾಮಗಳು ಒಳಪಟ್ಟಿದ್ದು, ತಾಲೂಕಿನ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿದ್ದರೂ ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ಬಸ್‌ಗೆ ಕಾಯುವ ಪರಿಸ್ಥಿತಿ ಇದೆ. ನಂದುಗುಡಿಯಲ್ಲೇ ನಾಡಕಚೇರಿ, ಕೃಷಿ ರೈತರ ಕೇಂದ್ರ ತೋಟಗಾರಿಕೆ ಇಲಾಖೆ, ಪೋಸ್ಟ್ ಆಫೀಸ್, ಕೆನರಾ ಬ್ಯಾಂಕ್, ಪೊಲೀಸ್‌ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತಿತರ ಸರ್ಕಾರಿ ಕಚೇರಿಗಳಿವೆ ಇದರಿಂದ ಗ್ರಾಮಸ್ಥರು ಪ್ರತಿನಿತ್ಯ ನಂದಗುಡಿಗೆ ಬಂದು ಹೋಗಬೇಕಿದೆ, ಆದರೆ ಬಸ್ ನಿಲ್ದಾಣವಿದಲ್ಲೆ ರಸ್ತೆ ಮಧ್ಯೆ ನಿಂತು ಪರದಾಡುವ ಸ್ಥಿತಿ ಶೋಚನೀಯವಾಗಿದೆ.
ಎರಡೂ ಕಡೆ ಒಂದೂ ಇಲ್ಲ:
ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿ ನಂದಗುಡಿಯ ಮಧ್ಯಭಾಗದಲ್ಲಿ ಹಾದು ಹೋಗಿದೆ, ಇದೇ ರಸ್ತೆಯ ಪಕ್ಕದಲ್ಲಿ ಪೊಲೀಸ್ ಠಾಣೆ, ಸರ್ಕಾರಿ ಶಾಲೆ, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಾಲಾ ಕಾಲೇಜುಗಳಿವೆ, ಹೊಸಕೋಟೆ, ಬೆಂಗಳೂರು ಚಿಂತಾಮಣಿ ಕೋಲಾರದ ಕಡೆ ಪ್ರಯಾಣಿಸಲು ಇದೇ ರಸ್ತೆಗೆ ಬರಬೇಕಿದೆ ಆದರೆ ದುರಾದೃಷ್ಟವೆಂದರೆ ಎರಡೂ ಕಡೆ ಬಸ್ ತಂಗುದಾಣ ಇಲ್ಲದಿರುವುದು ವಿಪರ್ಯಾಸವಾಗಿದೆ. ಇದರಿಂದ ವದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಅಶಕ್ತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಯಾಣಿಕರಿಗೆ ಪರದಾಟ:
ಇನ್ನೂ ಬಸ್ ನಿಲುಗಡೆ ಸ್ಥಳದಲ್ಲಿ ಅಂಗಡಿ ಮಳಿಗೆಗಳಿದ್ದು ಅಲ್ಲಿ ಪ್ರಯಾಣಿಕರೇನಾದರೂ ನಿಂತುಕೊಂಡರೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿ ವಾಲೀಕರು ಗದರುತ್ತಾರೆ. ಇದರಿಂದ ಪ್ರಯಾಣಿಕರು ಮುಜಗರುಕ್ಕೀಡಾಗುತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ ಗಮಹರಿಸಿ ಸೂಕ್ತ ಬಸ್ ನಿಲ್ದಾಣ ತಂಗುದಾಣ ನಿರ್ಮಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಅಪಘಾತ ವಲಯ:
ರಸ್ತೆ ಬದಿಯಲ್ಲಿಯೇ ನಿಂತುಕೊಳ್ಳುವುದರಿಂದ ಅಪಘಾತಗಳಾಗುವ ಸಂಭವವೂ ಹೆಚ್ಚು. ಜತೆಗೆ ಬೆಂಗಳೂರು ಚಿಂತಾಮಣಿ ಹೆದ್ದಾರಿಯಾದ್ದರಿಂದ ವಾಹನ ದಟ್ಟಣೆಯೂ ಹೆಚ್ಚಾಗಿರುತ್ತದೆ. ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರಿಗೆ ವಾತ್ರ ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಮಳೆ ಬಂದರೆ ಪ್ರಯಾಣಿಕರ ಗೋಳು ಹೇಳತೀರದು. ತಂಗುದಾಣವಿಲ್ಲದ ಕಾರಣ ಮಳೆಯಲ್ಲೇ ನೆನೆದು ಬಸ್‌ಗೆ ಕಾಯಬೇಕಿದೆ. ಇನ್ನಾದರು ಸ್ಥಳೀಯ ಆಡಳಿತ ಬಸ್ ತಂಗುದಾಣ ನಿರ್ವಾಣಕ್ಕೆ ಮುಂದಾಗಲಿ ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ಊರಿಂದ ಬೇರೆ ಊರಿಗೆ ತೆರಳುವ ದಿನನಿತ್ಯದ ಪ್ರಯಾಣಿಕರು, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಹಿಳೆಯರು, ಗರ್ಭಿಣಿಯರು, ರೋಗಿಗಳು ಸರಿಯಾದ ಬಸ್ ನಿಲ್ದಾಣ ವಿಲ್ಲದೇ ಬಿಸಿಲಲ್ಲೇ ಬಸ್‌ಗಾಗಿ ಕಾಯಬೇಕಿದೆ. ಬಸ್‌ಗಾಗಿ ಗಂಟೆ ಗಟ್ಟಲೆ ರಸ್ತೆ ಬದಿ ನಿಲ್ಲುವಂತಾಗಿದೆ.
ರುದ್ರೇಶ್, ನಂದಗುಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net