ಹೊಸ ಹೋರಾಟಗಳ ವರ್ಷ

ಜಿಲ್ಲಾದ್ಯಂತ ರೈತರ ಕಿಚ್ಚಿಗೆ ಮುನ್ನುಡಿ
ಜಿಲ್ಲಾದ್ಯಂತ ರೈತರ ಕಿಚ್ಚಿಗೆ ಮುನ್ನುಡಿ
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ನೂತನ ವರ್ಷ ಜಿಲ್ಲೆಯಲ್ಲಿ ರೈತಾಪಿ ವರ್ಗದ ಹೋರಾಟದ ಕಿಚ್ಚಿಗೆ ಮುನ್ನುಡಿಯಂತಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಭೂಸ್ವಾಧೀನ ಗುಮ್ಮ ಬೆಂಬಿಡದೆ ಕಾಡುತ್ತಿದ್ದು, ಧರಣಿ, ಪ್ರತಿಭಟನೆ, ಸತ್ಯಾಗ್ರಹಗಳ ಸಾಧ್ಯತೆ ಗೋಚರಿಸುತ್ತಿದೆ.
ಜಿಲ್ಲೆಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮುನ್ನುಡಿ ಬರೆದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯ ರೈತರ ಹೋರಾಟ ಇದೀಗ ಜಿಲ್ಲಾದ್ಯಂತ ಬಿಸಿ ಹುಟ್ಟಿಸಿದೆ. ಸತತ 4 ವರ್ಷಗಳ ಚನ್ನರಾಯಪಟ್ಟಣದ ಸುಧೀರ್ಘ ಹೋರಾಟಕ್ಕೆ ಸರ್ಕಾರವೇ ತಲೆಬಾಗಿದ್ದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ರೈತರ ಒಗ್ಗಟ್ಟಿನ ಹೋರಾಟಕ್ಕೆ ಲ ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಈ ಹೋರಾಟ ಸಾಕ್ಷಿಯಾದಂತಾಗಿದೆ. ದೇವನಹಳ್ಳಿಯ ಭೂಸ್ವಾಧೀನ ವಿರೋಧಿ ಹೋರಾಟದ ಕಿಚ್ಚು ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾುರಕ್ಕೂ ವ್ಯಾಪಿಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಿಚ್ಚು ಹೊತ್ತಿ ಉರಿಯುವ ಲಕ್ಷಣಗಳು ದಟ್ಟವಾಗಿವೆ.
ಎಲ್ಲೆಲ್ಲಿ ಹೋರಾಟದ ಕಿಚ್ಚು?
ನೆಲಮಂಗಲ ತಾಲೂಕಿನಲ್ಲಿ ನೂತನ ವಿಮಾನ ನಿಲ್ದಾಣ ಪ್ರಸ್ತಾವನೆ ವಿರುದ್ಧ ತಾಲೂಕಿನ ರೈತರು ಈಗಾಗಲೇ ದಂಗೆ ಎದ್ದಿದ್ದಾರೆ. ಶಾಸಕರಾದಿಯಾಗಿ ಇಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಕೊಡುವುದಿಲ್ಲ ಎಂಬ ಭರವಸೆ ವ್ಯಕ್ತವಾಗಿದ್ದರೂ ವಿಷಯ ಬೂದಿಮುಚ್ಚಿದ ಕೆಂಡದಂತಿದೆ. ಮುಂದಿನ ದಿನಗಳಲ್ಲಿ ಇದು ಹೊಸ ಹೋರಾಟಕ್ಕೆ ನಾಂದಿ ಹಾಡಲಿದೆ ಎಂಬ ಮಾತು ದಟ್ಟವಾಗಿದೆ. ಏತನ್ಮಧ್ಯೆ ಹೊಸಕೋಟೆಯಲ್ಲಿ ಟೌನ್‌ಶ್ಿ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ದವಾಗುತ್ತಿರುವುದು ಆ ಭಾಗದ ರೈತರನ್ನು ರೊಚ್ಚಿಗೆಬ್ಬಿಸಿದೆ. ನಂದಗುಡಿ ವ್ಯಾಪ್ತಿಯಲ್ಲಿ ಈಗಾಗಲೇ ರೈತ ಮುಖಂಡರು ಸಾಕಷ್ಟು ಸರಣಿ ಸಭೆಗಳನ್ನು ನಡೆಸಿದ್ದು ಮುಂದಿನ ದಿನಗಳಲ್ಲಿ ವಿಷಯ ದೊಟ್ಟಮಟ್ಟದಲ್ಲಿ ಸುದ್ದಿಯಾಗುವ ಲಕ್ಷಣ ಕಂಡುಬರುತ್ತಿದೆ. ಇನ್ನು ದೊಡ್ಡಬಳ್ಳಾಪುರದಲ್ಲಿ ಕಸ ಘಟಕಕ್ಕೆ ಭೂಸ್ವಾಧೀನ ಹಾಗೂ ದೊಡ್ಡಬೆಳವಂಗಳ ವ್ಯಾಪ್ತಿಯಲ್ಲಿನ ಭೂಮಿ ಮೇಲೆ ಸರ್ಕಾರಕ್ಕೆ ಬಿದ್ದಿರುವ ಕಣ್ಣು, ಆ ಭಾಗದ ರೈತರ ಕಣ್ಣನ್ನು ಕೆಂಪಾಗಿಸಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲಿಯೂ ಇದೇ ವಿಷಯ ಪ್ರಸ್ತಾಪವಾಗಿದ್ದು ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ಆ ಭಾಗದಲ್ಲಿ ಆಕ್ರೋಶ ಮಡುಗಟ್ಟಿದೆ. ಇದರ ನಡುವೆ ದೇವನಹಳ್ಳಿ ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕರಣ ಕೈಬಿಟ್ಟಿದ್ದರು. ಸರ್ಕಾರದ ಕೆಲವು ಷರತ್ತುಗಳು ಹೋರಾಟಗಾರಿಗೆ ಬಿಸಿತುಪ್ಪವಾಗಿದ್ದು, ಇದರ ವಿರುದ್ಧ ಮತ್ತೊಮ್ಮೆ ರಣಕಹಳೆ ಊದುವ ಸನ್ನಿವೇಶ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರದ ೋಷಣೆ ಜೀವಂತ:
ರಾಜ್ಯದಲ್ಲಿ ಜಿಲ್ಲಾ ಕೇಂದ್ರವೇ ಇಲ್ಲದ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ೋಷಣೆ ವಿಷಯ ಜೀವಂತಾಗಿಯೇ ಇದೆ. ಈ ಹಿಂದಿನ ಸರ್ಕಾರದ ಅವಧಿಯಿಂದಲೂ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಮಧ್ಯೆ ಜಿಲ್ಲಾ ಕೇಂದ್ರದ ಹೋರಾಟ ನಡೆಯುತ್ತಲೇ ಇದೆ. ಆದರೆ ಇದಕ್ಕೆ ತಾರ್ಕಿಕ ಪರಿಹಾರವಂತೂ ಸಿಕ್ಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಆಗಾಗ ಇದರ ಪ್ರಸ್ತಾಪ ಮಾಡಿದರೂ ನಂತರದ ದಿನಗಳಲ್ಲಿ ಧ್ವನಿ ಕಳೆದುಕೊಳ್ಳುತ್ತಲೇ ಇದೆ. ನೂತನ ವರ್ಷದಲ್ಲಾದರೂ ಜಿಲ್ಲೆಗೆ ಜಿಲ್ಲಾ ಕೇಂದ್ರದ ಭಾಗ್ಯ ದೊರೆಯುವುದೇ ಎಂಬುದನ್ನು ಕಾದುನೋಡಬೇಕಿದೆ.
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಶುಕ್ರದೆಸೆ!
ಜಿಲ್ಲೆಯಲ್ಲಿ ಬೆರಳೇಣಿಕೆಷ್ಟು ಪ್ರವಾಸಿ ತಾಣಗಳು ಪ್ರಸಿದ್ಧಿ ಪಡೆದಿದ್ದರೂ ಬಹಳಷ್ಟು ವಿಶೇಷ ಐತಿಹಾಸಿಕ, ನೈಸರ್ಗಿಕ ಮಹತ್ವವುಳ್ಳ ಸ್ಥಳಗಳು ತೆರೆಮರೆಯಲ್ಲಿಯೇ ಇವೆ. ಇವುಗಳಿಗೂ ಕೂಡ ಮನ್ನಣೆ ಸಿಗುವ ಕಾಲ ಸನ್ನಿಹಿತವಾಗಿದ್ದು, ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳಿಗೆ ಶುಕ್ರದೆಸೆ ಆರಂಭವಾಗಲಿದೆ. ನೂತನ ವರ್ಷದಲ್ಲಿ ಇವೆಲ್ಲ ತಾಣಗಳು ಅಭಿವೃದ್ಧಿಯಾಗಿ ಜಿಲ್ಲೆ ಪ್ರಮುಖ ಪ್ರವಾಸಿ ತಾಣಗಳ ತವರೂರು ಎನಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ. ದೇವನಹಳ್ಳಿ ಕೋಟೆ, ಕುಂದಾಣ ಬೆಟ್ಟ, ಶ್ರೀಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಆವತಿ ಬೆಟ್ಟ, ತಿಮ್ಮರಾಯಸ್ವಾಮಿ ದೇವಸ್ಥಾನ, ಆವತಿ ಕೆರೆ, ಶಿರಡಿ ಸಾಯಿ ಬಾಬಾ ದೇವಾಲಯ, ವೃಕ್ಷೋದ್ಯಾನ ಟ್ರೀ ಪಾರ್ಕ್, ಕೆಂಪೇಗೌಡ ವಿಮಾನ ನಿಲ್ದಾಣ ಘಾಟಿ ಸುಬ್ರಹ್ಮಣ್ಯ, ಚಿಕ್ಕ ಮಧುರೆ, ಮಾಕಳಿ ದುರ್ಗ ಬೆಟ್ಟ, ಹುಲ್ಲುಕುಡಿ ಬೆಟ್ಟ. ಶಿವಗಂಗೆ ಬೆಟ್ಟ, ನಿಜಗಲ್ ಸಿದ್ದರಬೆಟ್ಟ, ಉದ್ದಾನ ವೀರಭದ್ರ ಸ್ವಾಮಿ ದೇವಸ್ಥಾನ, ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನ, ವೀರಭದ್ರ ಸ್ವಾಮಿ ದೇವಸ್ಥಾನ-ದೇವರ ಹೊಸಹಳ್ಳಿ, ಮಣ್ಣೇ(ಮಾನ್ಯಪುರ), ಶ್ರೀ ರಾಮಲಿಂಗೇಶ್ವರ ದೇವಸ್ಥಾನ-ಬರದಿ ಬೆಟ್ಟ. ಹೊಸಕೋಟೆ ಕೆರೆ(ದೊಡ್ಡ ಅಮಾನಿಕೆರೆ), ಧರ್ಮೇಶ್ವರ ದೇವಸ್ಥಾನ-ಕೊಂಡ್ರಹಳ್ಳಿ, ಕಾಲಭೈರವೇಶ್ವರ ದೇವಸ್ಥಾನ ಜಡಿಗೇನಹಳ್ಳಿ. ಕಾಲಕುಂಟೆ ರಂಗನಾಥ ಸ್ವಾಮಿ ದೇವಸ್ಥಾನ. ಜಡಿಗೆನಹಳ್ಳಿ ಸಪ್ತಮಾತೆಯ ದೇವಸ್ಥಾನ-ಈ ಸ್ಥಳಗಳು ಜಿಲ್ಲೆಯ ಪ್ರಮುಖ 25 ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿವೆ ಎಂಬ ಆಶಯ ಮೂಡಿಸಿವೆ.
ಕಾಣಿಗೆ ಹುಂಡಿ ಕಳ್ಳರು ಸಿಗುವರೇ?
ಕಳೆದ ನಾಲ್ಕೈದು ವರ್ಷದಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ದೇವಸ್ಥಾನದ ಕಾಣಿಗೆ ಹುಂಡಿಗಳ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೆ ಒಂದು ಪ್ರಕರಣದಲ್ಲೂ ಕಳ್ಳರು ಸಿಕ್ಕಿಬಿದ್ದಿಲ್ಲ. ಇದು ಧಾರ್ಮಿಕವಾಗಿ ಭಕ್ತರ ಮನಸ್ಸನು ಬಹಳ ಘಾಸಿಗೊಳಿಸಿದೆ. ಪೊಲೀಸ್ ಇಲಾಖೆ ಹುಂಡಿ ಕಳ್ಳರ ಕೈಗೆ ಕೊಳ ತೊಡಿಸುವವರೆಗೆ ದೇವಸ್ಥಾನಕ್ಕೆ ಭದ್ರತೆ ಇಲ್ಲದಂತಾಗಿದೆ ಎಂಬ ಆತಂಕ ಮುಂದಿನ ದಿನಗಳಲ್ಲಿ ದೂರವಾಗಲಿ ಎಂಬುದು ಭಕ್ತರ ಆಶಯವಾಗಿದೆ.
ಮೆಟ್ರೋ ವಿಸ್ತರಣೆ ಭರವಸೆ:
ನೆಲಮಂಗಲ ನಗರದವರೆಗೆ ಮೆಟ್ರೋ ವಿಸ್ತರಣೆಯಾಗಬೇಕು ಎಂಬ ಒತ್ತಡ ಬಹಳ ದಿನಗಳಿಂದ ಕೇಳಿಬರುತ್ತಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಅದೇ ರೀತಿ ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ ಪ್ರಸ್ತಾಪ ಆಗಾಗ ಸದ್ದು ಮಾಡುತ್ತಿರುತ್ತೆ ಮುಂದಿನ ವರ್ಷದಲ್ಲಿ ಕೊಡುಗೆಯಾಗಿ ಇದು ಸಾಕಾರಗೊಳ್ಳಲಿ ಎಂಬುದು ಎರಡೂ ತಾಲೂಕು ಜನರ ಆಸೆಯಾಗಿದೆ.
ಸೂರತ್ ಸೀರೆಗಳಿಗೆ ಬೀಳಲಿದೆಯೇ ಅಂಕುಶ?
ದೊಡ್ಡಬಳ್ಳಾಪುರಕ್ಕೆ ಬರುವ ಸೂರತ್ ಸೀರೆಗಳನ್ನು ನಿಷೇಧ ಮಾಡಬೇಕು ಎಂಬು ದೊಡ್ಡಬಳ್ಳಾಪುರ ಭಾಗದ ಸ್ಥಳೀಯ ನೇಕಾರರ ಪ್ರಮುಖ ಒತ್ತಾಯವಾಗಿದೆ. ದೊಡ್ಡಬಳ್ಳಾಪುರದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಳಿಗೆಗಳ ನಿರ್ಮಾಣ ಹಾಗೂ ನೇಕಾರರ ಭವನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಸೂರತ್ ಸೀರೆಗಳಿಂದಲೇ ದೊಡ್ಡಬಳ್ಳಾಪುರ ನೇಕಾರರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಸೂರತ್ ಸೀರೆಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ದೊಟ್ಟಮಟ್ಟದಲ್ಲಿ ಸದ್ದು ಮಾಡುತ್ತಿದೆ ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬಹುದು ಎಂಬುದು ನೇಕಾರರ ನಿರೀಕ್ಷೆಯಾಗಿದೆ.
ಜ್ವಲಂತ ಸಮಸ್ಯೆಗಳು:
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ತಂಬಾಕು ಮಾರಾಟ ನಿಯಮ ಉಲ್ಲಂಘನೆ, ಬಾಲ್ಯವಿವಾಹ ಪ್ರಕರಣಗಳು, ಬಾಲಕಾರ್ಮಿಕ ಪದ್ಧತಿ..ಹೀಗೆ ಕೆಲವೊಂದು ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಅಬಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲಕಾರ್ಮಿಕ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಆಗಾಗ ದಾಳಿ ನಡೆಸಿ ಇಂಥ ಪ್ರಕರಣಗಳ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದರೂ ಪರಿಣಾಮಕಾರಿಯಾಗಿ ಇವು ತಗ್ಗಿಲ್ಲ. ನೂತನ ವರ್ಷದಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಇಂಥಹವುಗಳಿಗೆ ಕಡಿವಾಣ ಬಿದ್ದರೆ ಜಿಲ್ಲೆ ಸುಭಿಕ್ಷ ಎಂಬ ನಿರೀಕ್ಷೆ ಜನರದ್ದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net