ಅಭಿಮಾನಿಗಳ ಇಷ್ಟಾರ್ಥ ಸಿದ್ದಿಯಾಗಲಿ

MTB birthday
MTB birthday
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜಕೀಯದಲ್ಲಿ ಅಧಿಕಾರ ಇರಲಿ, ಇಲ್ಲದಿರಲಿ ನನ್ನ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶ್ರೀ ಮಂಜುನಾಥ ಸ್ವಾಮಿ ನನ್ನೆಲ್ಲ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಇಷ್ಟಾರ್ಥವನ್ನು ಸಿದ್ದಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಮಾಜಿ ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಗರುಡಾಚಾರ್ ಪಾಳ್ಯದ ಸಚಿವರ ನಿವಾಸದಲ್ಲಿ ಸೋಮವಾರ ಅಭಿಮಾನಿಗಳು ಹಮ್ಮಿಕೊಂಡಿದ್ದ ಜನ್ಮದಿನ ಆಚರಣೆಯಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ರಾಜಕೀಯದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ ಆದರೆ ಅಧಿಕಾರ ಇರುವಾಗ ಜನರಿಗೆ ನಾವೇನು ಮಾಡಿದ್ದೇವೆ, ಯಾವ ಅಭಿವೃದ್ಧಿ ಕೆಲಸಗಳು ನಡೆದಿವೆ, ಆಯ್ಕೆಯಾದ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬುದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ನಾನು ನನ್ನ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಅದೇ ಜನರ ಪ್ರೀತಿ ನನ್ನ ಹಾಗೂ ನನ್ನ ಕುಟುಂಬದ ಶ್ರೇಯಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ:
ಹೊಸಕೋಟೆ ತಾಪಂ ಮಾಜಿ ಸದಸ್ಯ ಚೀಮಂಡಹಳ್ಳಿ ರಾಜೇಂದ್ರ ಮಾತನಾಡಿ, ಎಂಟಿಬಿ ನಾಗರಾಜಣ್ಣ ಅವರು ಅಧಿಕಾರ ಇರಲಿ, ಇಲ್ಲದಿರಲಿ ಯಾವಾಗಲೂ ಸಮಚಿತ್ತರಾಗಿರುತ್ತಾರೆ ಹಿಗ್ಗುವುದು, ಕುಗ್ಗುವುದು ಅವರ ಜಾಯಮಾನವೇ ಅಲ್ಲ, ಅಂಥ ಧೀಮಂತ ವ್ಯಕ್ತಿಯ ಹುಟ್ಟುಹಬ್ಬ ಆಚರಿಸಲು ನಮಗೆ ಬಹಳ ಸಂತೋಷ ಎನಿಸುತ್ತದೆ ಎಂದು ಹೇಳಿದರು. ಅವರು ಶಾಸಕರಾಗಿ, ರಾಜ್ಯದ ಮಂತ್ರಿಗಳಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಮುಂದಿನ ದಿನಗಳಲ್ಲೂ ಅವರ ಮಾರ್ಗದರ್ಶನ ನಮಗೆ ಶ್ರೀರಕ್ಷೆಯಾಗಿರುತ್ತದೆ ಎಂದು ಹೇಳಿದರು.
ಮಂಜುನಾಥಸ್ವಾಮಿಗೆ ವಿಶೇಷ ಪೂಜೆ:
ಈ ಬಾರಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಕುಟುಂಬದ ಸದಸ್ಯರು, ಅಭಿಮಾನಿಗಳ ಜತೆ ಗರುಡಾಚಾರ್‌ಪಾಳ್ಯದಲ್ಲಿನ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳಿಗೆ ಅನ್ನದಾಸೋಹ ಹಾಗೂ ಸಿಹಿಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಸಚಿವರ ಮನೆ ಮುಂದೆ ಜಮಾಯಿಸಿದ್ದರು. ಬೃಹತ್ ಹೂವಿನ ಹಾರವನ್ನು ನೆಚ್ಚಿನ ನಾಯಕನಿಗೆ ಹಾಕುವ ಮೂಲಕ ಜಯಕಾರ ಕೂಗಿದರು. 75 ವರ್ಷದ ಹುಟ್ಟುಹಬ್ಬದ ಪ್ರಯುಕ್ತ 75 ಕೆಜಿಯ ಬೃಹತ್ ಕೇಕ್ ಕತ್ತರಿಸುವ ಮೂಲಕ ಮಾಜಿ ಸಚಿವರಿಗೆ ಅಭಿಮಾನಿಗಳು ಶುಭಕೋರಿದರು. ಹೊಸಕೋಟೆಯ ಎಂಟಿಬಿ ಭವನದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹುಟ್ಟುಹಬ್ಬ ಆಚರಿಸಿದರು. ಹೊಸಕೋಟೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಕಟೌಟ್‌ಗಳನ್ನು ಹಾಕಿ ಹುಟ್ಟುಹಬ್ಬದ ಶುಭಕೋರಿದ ದೃಶ್ಯಗಳು ಕಂಡುಬಂದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net