ಅವಧಿ ಮುಗಿದಿರುವ ಎಲ್ಲ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ವಹಿಸಿದ್ದು, ಈ ವರ್ಷಾಂತ್ಯದೊಳಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆ ನಡೆದೇ ನಡೆಯುತ್ತದೆ, ಅಧಿಕಾರ ವಿಕೇಂದ್ರೀಕರಣದ ಉದ್ದೇಶವನ್ನು ಸರ್ಕಾರ ಈಡೇರಿಸುತ್ತದೆ ಎಂದು ಸಚಿವರು ತಿಳಿಸಿದರು. ಜಲಜೀವನ ಅಭಿಯಾನದ ಅಡಿಯಲ್ಲಿ ಪೈಪ್‌ಲೈನ್ ಅಳವಡಿಸಲು ಅಗೆದಿರುವ ರಸ್ತೆಯನ್ನು ಮರು ಅಭಿವೃದ್ಧಿ ಪಡಿಸದೇ ಇರುವ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಏನು ಕ್ರಮ ವಹಿಸುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು. ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾದ ಈಶ್ವರ ಖಂಡ್ರೆ, ನೀರಿನ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಗಳ ಪರಿಶೀಲನೆ ನಡೆಸಿ ಸಂಚಾರಕ್ಕೆ ಅಡ್ಡಿ ಆಗದ ರೀತಿ ತುರ್ತು ಕ್ರಮ ವಹಿಸಲು ಮತ್ತು ಎಷ್ಟು ಗ್ರಾಮಗಳಲ್ಲಿ ಹರ್‌ಘರ್ ಜಲ್ ವರದಿ ಮಾಡಲಾಗಿದೆ. ಎಷ್ಟು ಪ್ರಮಾಣಪತ್ರ ಆಗಿದೆ ಎಂಬ ಸ್ಪಷ್ಟ ಮಾಹಿತಿ ಒದಗಿಸಲು ಸೂಚಿಸಿದರು.