ಮಾವಿಗೆ ಬಿಸಿಲು, ಆಲಿಕಲ್ಲಿನ ಸಂಕಷ್ಟ

mango problem
mango problem
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಣ್ಣುಗಳ ರಾಜ ಎನಿಸಿರುವ ಮಾವಿಗೆ ಬಿಸಿಲ ತಾಪ ಒಂದಡೆಯಾದರೆ, ಮತ್ತೊಂದೆಡೆ ಬಿರುಗಾಳಿ ಸಹಿತ ಮಳೆಯೊಂದಿಗೆ ಆಲಿಕಲ್ಲು ಸಂಕಷ್ಟ ತಂದೊಡ್ಡಿದ್ದು, ಮಾವು ಬೆಳೆಗಾರರು ಅತಂಕಗೊಂಡಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ೋಷಿಸಲಾಗಿದೆ. ಜಿಲ್ಲೆಯಲ್ಲಿ ಮೇ ಅಂತ್ಯ ಹಾಗೂ ಜೂನ್ ಆರಂಭದಲ್ಲಿ ಮಾವು ಇಳುವರಿ ಕಟಾವಿಗೆ ಬರಲಿದ್ದು ಅಷ್ಟರಲ್ಲಿ ಆಲಿಕಲ್ಲು ಮಳೆ ಸುರಿದರೆ ನಿರೀಕ್ಷಿತ ಸಲಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಅತಂಕ ಮೂಡಿಸಿದೆ. ಈಗಾಗಲೇ ಬಿಸಿಲ ಬೇಗೆಗೆ ತೇವಾಂಶ ಕುಸಿತಗೊಂಡು ಗುಣಮಟ್ಟದ ಹಣ್ಣು ದೊರೆಯುವುದು ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಜತೆಗೆ ಆಲಿಕಲ್ಲು ಮಳೆಯಿಂದಾಗಿ ಮರಗಳಲ್ಲಿನ ಮಾವಿನ ಕಾಯಿಗಳು ಏಟು ತಿಂದು ಕಪ್ಪಾಗಿ ಕೊಳೆಯಲಾರಂಭಿಸುತ್ತವೆ. ಇದರಿಂದ ಇಳುವರಿ ಗಣನೀಯವಾಗಿ ಇಳಿಕೆಯಾಗಲಿದೆ ಎಂಬ ಆತಂಕ ತಂದೊಡ್ಡಿದೆ.
ಗುಣಮಟ್ಟದ ಹಣ್ಣು ಸಿಗುತ್ತಿಲ್ಲ:
ಮಾರುಕಟ್ಟೆಗಳಿಗೆ ಮಾವಿನ ಹಣ್ಣು ಆಗಮಿಸುತ್ತಿದ್ದರೂ ಗುಣಮಟ್ಟದ ಹಣ್ಣಿಗೆ ಹುಡುಕಾಟ ನಡೆಸುವಂತಾಗಿದೆ. ಬಿಸಿಲ ಬೇಗೆಗೆ ಮಾಗಿದಂತೆ ಕಾಣುವ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಲವಾಗುತ್ತಿವೆ. ದಪ್ಪ ಗಾತ್ರದ ಹಣ್ಣುಗಳೇ ಕಾಣುತ್ತಿಲ್ಲ. ಬದಲಿಗೆ ಪೀಚಿನಂತೆ ಇರುವ ಮಾವಿನ ಹಣ್ಣುಗಳು ಕಂಡುಬರುತ್ತಿವೆ. ಅಲ್ಲದೆ ಅವುಗಳನ್ನು ಕೃತಕವಾಗಿ ಹಣ್ಣು ಮಾಡುತ್ತಿರುವುದರಿಂದ ನಿಜವಾದ ಮಾವಿನ ಸವಿ ಸವಿಯಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಗುಣಮಟ್ಟದ ಹಣ್ಣಿಗೆ ಕೆಜಿಗೆ 120 ರೂ.ನಿಂದ 150 ರೂಪಾಯಿ ದರ ಕಂಡುಬರುತ್ತಿದೆ, ಸ್ವಲ್ಪ ಗುಣಮಟ್ಟದ ಹಣ್ಣು ಕೆಜಿಗೆ 200 ರೂಪಾಯಿಗೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ಹಣ್ಣುಗಳ ಮೇಲ್ಮೈ ಚೆನ್ನಾಗಿ ಕಂಡರೂ ಒಳಗೆ ಕೊಳೆತ ರೀತಿ, ಹುಳಿಹುಳಿಯಾದ ರುಚಿ ಕಂಡುಬರುತ್ತಿದೆ ಇದರಿಂದ ಗ್ರಾಹಕರೂ ಮಾವಿನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
25 ಸಾವಿರ ಮೆಟ್ರಿಕ್ ನಿರೀಕ್ಷೆ:
ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟರ್ ಪ್ರದೇಶದಲ್ಲಿನ ಮಾವು ಬೆಳೆಯಲಾಗಿದ್ದು ಈ ಬಾರಿ ಉತ್ತಮ ಸಲಿನ ನಿರೀಕ್ಷೆ ಇತ್ತು. ಈ ವರ್ಷ ಪ್ರಾರಂಭದಲ್ಲಿ 30 ಸಾವಿರ ಮೆಟ್ರಿಕ್ ಟನ್‌ಗಳಷ್ಟು ಮಾವು ಉತ್ಪಾದನೆ ಆಗುವ ನಿರೀಕ್ಷೆ ಇತ್ತು. ಸದ್ಯದ ವಾತಾವರಣ ಗಮನಿಸಿದರೆ ಇದು ಕಷ್ಟಸಾಧ್ಯ ಎನ್ನುವಂತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಉಷ್ಣಾಂಶ 36 ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿತ್ತು ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಉಷ್ಣಾಂಶದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ ಆದರೆ ಆಲಿಕಲ್ಲು ಮಳೆಯಿಂದಾಗಿ ಸಲಿಗೆ ಸಂಕಷ್ಟ ಎದುರಾಗಿದೆ. ಕಾಯಿ ಕಟ್ಟುವ ಪ್ರಮಾಣ ಕುಸಿತ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ 25 ಸಾವಿರ ಮೆಟ್ರಿಕ್ ಟನ್ ಸಲು ದೊರೆಯುವ ನಿರೀಕ್ಷೆ ಇದೆ.
ಕಳೆದ ಹಲವು ದಿನಗಳಿಂದ ಬಿಸಿಲ ತೀವ್ರ ತಾಪಮಾನದಿಂದ ಮರಗಳಲ್ಲೇ ಹೂ ಉದುರುತ್ತಿದ್ದವು, ನಿರೀಕ್ಷಿತ ಕಾಯಿ ಕಚ್ಚಿರಲಿಲ್ಲ. ಇದರ ಜತೆಗೆ ಎರಡು ದಿನದಿಂದ ಸುರಿದ ಆಲಿಕಲ್ಲು ಮಳೆಗೆ ಮತ್ತಷ್ಟು ಸಲು ಹಾಳಾಗುವ ಆತಂಕ ಎದುರಾಗಿದೆ. ಪ್ರತಿ ಬಾರಿಯೂ ಒಂದಲ್ಲ ಒಂದು ಪ್ರಾಕೃತಿಕ ವೈರಿತ್ಯದಿಂದ ಮಾವು ಬೆಳೆಗಾರರು ಸಂಕಷ್ಟ ಎದುರಿಸುತ್ತಲೇ ಬಂದಿದ್ದಾರೆ.
ಸತೀಶ್, ಮಾವು ಬೆಳೆಗಾರ ನೆಲಮಂಗಲ
ಗ್ರಾಮಾಂತರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮೇ ಅಂತ್ಯ ಹಾಗೂ ಜೂನ್ ಆರಂಭದಲ್ಲಿ ಮಾವು ಸಲು ಬರಲಿದೆ. ಬಿಸಿಲಿನ ತೀವ್ರ ಉಷ್ಣಾಂಶದಿಂದ ಮಾವು ಇಳುವರಿ ಮೇಲೆ ದುಷ್ಪರಿಣಾಮ ಬೀರಿದೆ. ಜಿಲ್ಲೆಯ ನೆಲಮಂಗಲ ಹಾಗೂ ದೇವನಹಳ್ಳಿ ಭಾಗದಲ್ಲಿ ಆಲಿಕಲ್ಲು ಮಳೆಯಾಗಿರುವುದರಿಂದ ಮಾವಿನ ಸಲು ಮರಗಳಲ್ಲೇ ಕೊಳೆಯುವ ಸಾಧ್ಯತೆ ಹೆಚ್ಚಿರುತ್ತದೆ ಇದೂ ಸಹ ಇಳುವರಿ ಮೇಲೆ ದುಷ್ಪರಿಣಾಮ ಬೀರಲಿದೆ. ಒಟ್ಟಾರೆಯಾಗಿ ಈ ಬಾರಿ 25 ಸಾವಿರ ಮೆಟ್ರಿಕ್ ಟನ್ ಸಲಿನ ನಿರೀಕ್ಷೆ ಇದೆ.
ಗುಣವಂತ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net