ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳು ಲಭ್ಯವಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಟೌನ್‌ನ ರಾಣಿ ಕ್ರಾಸ್‌ನಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಸಿಗುವಂತೆ ಮಾಡಲು ಮೇಳ ಆಯೋಜನೆ ಮಾಡಲಾಗಿದೆ. ವಿವಿಧ ತಳಿಯ ಮಾವು, ಹಲಸು, ನೇರಳೆ ಹಾಗೂ ಇತರೆ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ ಎಂದರು. ಮೇಳವು ಜೂ.7 ವರೆಗೆ ಅಂದರೆ ಭಾನುವಾರದವರೆಗೆ ಇರಲಿದ್ದು, ಶನಿವಾರ, ಭಾನುವಾರ ರಜಾ ದಿನ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದೆ ಎಂದು ಹೇಳಿದರು.
ಎಲ್ಲ ಮಳಿಗೆಗೆಳಿಗೆ ಸಚಿವರು ಭೇಟಿ ನೀಡಿ ರೈತರೊಂದಿಗೆ ಸಮಾಲೋಚಿಸಿ ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅವುಗಳ ರುಚಿ ಸವಿದರು.
ಅಧಿಕಾರಿಗಳು ಮಾಹಿತಿ ನೀಡಬೇಕು:
ಮಾವು ಒಂದು ಮಳೆಯಾಶ್ರಿತ ಬೆಳೆ. ಮಾವು ಫಸಲು ಆರಂಭವಾಗುವ ಸಂದರ್ಭದಲ್ಲಿ ರೈತರ ತೋಟಗಳಿಗೆ ತೋಟಗಾರಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಯಾವ ರೀತಿಯ ಔಷಧಿ ಸ್ಪ್ರೇ ಮಾಡಬೇಕು, ರೋಗ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಬೇಕು. ಉತ್ತಮ ಇಳುವರಿ ಬಂದು ಒಳ್ಳೆಯ ಬೆಲೆ ಸಿಕ್ಕರೆ ರೈತರಿಗೂ ಅನುಕೂಲ. ಹಾಗಾಗಿ ಅಧಿಕಾರಿಗಳು ಮಾವು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ಡಿಸಿ ಡಾ.ಕೆ.ಎನ್.ಅನುರಾಧಾ ಹೇಳಿದರು.
ಸಸ್ಯ ಸಂತೆ:
ಮೇಳದಲ್ಲಿ ಸಸ್ಯ ಸಂತೆ ಏರ್ಪಡಿಸಿದ್ದು ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ ಮಾಡಿದ ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಇಲಾಖೆ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಸ್ಯ ಸಂತೆಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಗುಣವಂತ ತಿಳಿಸಿದರು.