ಗ್ರಾಹಕರಿಗೆ ನಿಂಬೆ ‘ಹುಳಿ’

lemone rate
lemone rate
Published on
ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ತರಕಾರಿ ದರಗಳಲ್ಲಿ ಏರಿಳಿಕೆಯಾಗುತ್ತಿದ್ದರೆ ನಿಂಬೆಹಣ್ಣಿದ ಬೆಲೆ ಮಾತ್ರ ದಿನೆ ದಿನೇ ಗಗನಕ್ಕೇರುತ್ತಲೆ ಇದೆ. ಇಳುವರಿ ಕುಸಿತಗೊಂಡಿದ್ದು, ಬೇಡಿಕೆ ಹೆಚ್ಚಾಗಿದ್ದರಿಂದ ನಿಂಬೆಹಣ್ಣಿನ ದರ ದುಬಾರಿಯಾಗುತ್ತಿದ್ದು ಗ್ರಾಹಕರ ಪಾಲಿಗೆ ನಿಂಬೆ ಭಾರಿ ಹುಳಿ ಅನುಭವ ನೀಡುತ್ತಿದೆ.
ಗುಣಮಟ್ಟದ ನಿಂಬೆ ಸಿಗುತ್ತಿಲ್ಲ:
ದರ ದುಭಾರಿಯಾಗಿರುವ ನಡುವೆಯೇ ಗುಣಮಟ್ಟದ ನಿಂಬೆ ಹಣ್ಣು ಸಿಗದಂತಾಗಿದೆ, ಗುಣಮಟ್ಟದ ಹಣ್ಣು ಬೇಕೆಂದರೆ ಒಂದು ನಿಂಬೆಗೆ 15ರಿಂದ 20 ರೂಪಾಯಿ ತೆರಬೇಕಾಗಿದೆ. ಮಾರುಕಟ್ಟೆಗಳಲ್ಲಿ ಗುಣಮಟ್ಟದ ಹಣ್ಣುಗಳನ್ನು ಹುಡುಕಾಡಬೇಕಾಗಿದೆ. ಪೀಚಿನಂತಿರುವ ನಿಂಬೆಹಣ್ಣುಗಳಷ್ಟೇ ಸಿಗುತ್ತಿವೆ. ಅವೂ ಸಹ 10 ರಿಂದ 12 ರೂಪಾಯಿ ದರ ಏರಿಸಿಕೊಂಡಿವೆ. ಇಂಥ ಹಣ್ಣುಗಳನ್ನು ಹಿಂಡಿದರೆ ನಿಂಬೆರಸವೂ ಬರದಂತದ ಸ್ಥಿತಿ ಇದೆ. ಆದರೂ ಬೇಸಿಗೆ ಝಳದ ಹಿನ್ನೆಲೆಯಲ್ಲಿ ನಿಂಬೆ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದು ದಿನೆ ದಿನೇ ನಿಂಬೆ ದರ ಗಗನಮುಖಿಯಾಗುತ್ತಲೇ ಸಾಗುತ್ತಿದೆ.
ನಿಂಬೆ ಪಾನೀಯಾಗೆ ಡಿಮಾಂಡ್:
ಸಾಮಾನ್ಯವಾಗಿ ಎಲ್ಲ ಋತುಗಳಲ್ಲೂ ನಿಂಬೆ ಪಾನಿಯಕ್ಕೆ ಬೇಡಿಕೆ ಇರುತ್ತದೆ. ಆದರೆ ಬೇಸಿಗೆ ವೇಳೆ ಹೆಚ್ಚು ಡಿಮಾಂಡ್ ಇರುತ್ತದೆ. ಪಾನಿಯ ಅಂಗಡಿಗಳಲ್ಲಿ ಗ್ರಾಹಕರು ಮುಗಿಬೀಳುವುದು ಸಾಮಾನ್ಯವಾಗಿರುತ್ತದೆ. ಆದರೆ ನಿಂಬೆ ಹಣ್ಣಿನ ಕೊರತೆಯಿಂದಾಗಿ ಪಾನೀಯ ಅಂಗಡಿಗಳಲ್ಲೂ ದರ ಹೆಚ್ಚಿಸಲಾಗಿದೆ. ಇತರೆ ಹಣ್ಣುಗಳ ಜ್ಯೂಸ್‌ಗಳಿಗಿಂತ ನಿಂಬೆ ಜ್ಯೂಸ್ ದರ ಏರಿಕೆಯಾಗಿರುವುದು ಕಂಡಬರುತ್ತಿದೆ.
ಧಾರ್ಮಿಕ ಕೇಂದ್ರಗಳಲ್ಲೂ ನಿಂಬೆ ಮಾಯ:
ಸಾಮಾನ್ಯವಾಗಿ ಹಲವು ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ನಿಂಬೆಹಣ್ಣನ್ನು ಕಡ್ಡಾಯವಾಗಿ ಖರೀದಿಸಲಾಗುತ್ತದೆ ಹೂ ಹಣ್ಣು ಕಾಯಿ ಜತೆಗೆ ನಿಂಬೆ ಹಣ್ಣನ್ನು ಪೂಜೆಗೆ ಬಳಸಲಾಗುತ್ತದೆ. ದೇವರಿಂದ ಮಂತ್ರಿಸಿದ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಕೆಲವು ದಿನಗಳಿಂದ ನಿಂಬೆಹಣ್ಣಿನ ದರ ದುಭಾರಿಯಾಗಿರುವುದರಿಂದ ವ್ಯಾಪಾರಿಗಳೂ ಸಹ ಪೂಜಾ ಸಾಮಾಗ್ರಿ ಜತೆ ನಿಂಬೆ ಹಣ್ಣು ಮಾರಾಟವನ್ನು ನಿರ್ಬಂಧಿಸಿದ್ದಾರೆ. ಕೆಲವು ವ್ಯಾಪಾರಿಗಳಷ್ಟೇ ನಿಂಬೆ ಹಣ್ಣು ಮಾರಾಟ ಮಾಡುತ್ತಿದ್ದರೂ ನಿಂಬೆ ದರ ಕೇಳಿ ಭಕ್ತರು ಬೆಚ್ಚಿ ಬೀಳುವಂತಾಗಿದೆ. ಇದೇ ರೀತಿ ಮದುವೆಯ ಬೀಗರೂಟ, ಜಾತ್ರೆ ಉತ್ಸವಗಳ ಬೋಜನಗಳಲ್ಲೂ ನಿಂಬೆಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ದುಬಾರಿ ದರದಿಂದಾಗಿ ಎಲ್ಲಕ್ಕೂ ಬ್ರೇಕ್ ಬೀಳುತ್ತಿದೆ. ಜಾತ್ರಾ ಮಹೋತ್ಸವಗಳಲ್ಲಿ ನಿಂಬೆಹಣ್ಣಿನ ಪಾನಕ ನೀಡುವುದು ಸಾಮಾನ್ಯ. ಆದರೆ ನಿಂಬೆ ಹಣ್ಣಿದ ದುಬಾರಿ ದರದಿಂದಾಗಿ ಪಾನಕಗಳಲ್ಲಿ ನಿಂಬೆ ಹಣ್ಣಿಗೆ ಬದಲಾಗಿ ಕೇವಲ ಹುಣಸೆ ಹಣ್ಣನ್ನು ಬಳಸುತ್ತಿರುವುದು ಕಂಡುಬರುತ್ತಿದೆ.
ಈ ಬಾರಿಯೇ ದುಭಾರಿ:
ತೋಟಗಾರಿಕೆ ಬೆಳೆಯಾಗಿರುವ ನಿಂಬೆ ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಮಿನ್-ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದನ್ನು ವೈಜ್ಞಾನಿಕವಾಗಿ (ಸಿಟ್ರಸ್ ಆರಂಟಿಫೋಲಿಯ) ಎಂತಲೂ ಕರೆಯುತ್ತಾರೆ. ಆಂದ್ರಪದೇಶ ಮತ್ತು ಬೆಂಗಳೂರು ನಗರದ ಮಾರುಕಟ್ಟೆ ಸೇರಿ ಇತರೆ ಕಡೆಗಳಿಂದ ನಿಂಬೆಹಣ್ಣನ್ನು ಖರೀದಿಸಿಕೊಂಡು ಬಂದು ಜಿಲ್ಲೆಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ನಿಂಬೆಹಣ್ಣಿನ ದರ ಇಷ್ಟೊಂದು ಹೆಚ್ಚಳವಾಗಿದೆ.
-
ಸಾಮಾನ್ಯವಾಗಿ ಬೇಸಿಗೆ ವೇಳೆ ನಿಂಬೆ ಹಣ್ಣಿನ ಇಳುವರಿ ಕಡಿಮೆ ಇರುತ್ತದೆ. ಅದರೆ ಈ ಬಾರಿ ತೀವ್ರ ಬಿಸಿಲ ಝಳಕ್ಕೆ ನಿಂಬೆಹಣ್ಣಿನ ಗಿಡಗಳು ಒಣಗುತ್ತಿವೆ. ಕೊಳವೆಬಾವಿಗಳ ಮೂಲಕ ನೀರು ಹಾಯಿಸಲು ರೈತರು ಸಾಹಸ ನಡೆಸುತ್ತಿದ್ದರೂ ಸಾಕಷ್ಟು ತೇವಾಂಶ ಲಭ್ಯವಾಗುತ್ತಿಲ್ಲ. ಗಿಡಗಳಲ್ಲಿ ಪೀಚುಗಳೇ ಉದುರುತ್ತಿವೆ. ನಿಂಬೆ ಬಲಿಯುವಷ್ಟರಲ್ಲೇ ಮಣ್ಣು ಪಾಲಾಗುತ್ತಿವೆ. ಇದರಿಂದ ಇಳುವರಿಯಲ್ಲಿ ಭಾರಿ ಕುಸಿತವಾಗಿದೆ.
ದ್ಯಾವಪ್ಪ, ರೈತ ಚಿಕ್ಕಜಾಲ ಗ್ರಾಮ
ಎಪಿಎಂಸಿಗಳಲ್ಲೇ ನಿಂಬೆ ದರ ದುಬಾರಿಯಾಗಿದೆ, ಇವುಗಳನ್ನು ಕೊಂಡುತಂದು ಮಾರಾಟ ಮಾಡಲು ಹೋದರೆ ದರಕ್ಕೆ ಹೆದರಿ ಗ್ರಾಹಕರು ಖರೀದಿಸುತ್ತಿಲ್ಲ. ಬಿಸಿಲ ಝಳಕ್ಕೆ ತಂದ ನಿಂಬೆ ಹಣ್ಣುಗಳು ಬೇಗ ಬಾಡುತ್ತಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಗುಣಮಟ್ಟದ ಹಣ್ಣುಗಳು ಸಿಗುತ್ತಿಲ್ಲ. ಸಿಕ್ಕ ಹಣ್ಣುಗಳಲ್ಲಿ ರಸವೇ ಇಲ್ಲ ಎಂಬ ದೂರು ಬರುತ್ತಿದೆ. ಇದರಿಂದ ಕೆಲವು ದಿನ ನಿಂಬೆ ಹಣ್ಣಿನ ವ್ಯಾಪಾರವನ್ನು ಮುಂದೂಡಲು ಮುಂದಾಗಿದ್ದೇವೆ.
ಶಾಂತಪ್ಪ, ವ್ಯಾಪಾರಿ ನಂದಗುಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net