ಜಿಲ್ಲೆಯಲ್ಲಿ ಮತ್ತೊಂದು ಭೂಸ್ವಾಧೀನ ಗುಮ್ಮ

Land acquisition
Land acquisition
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನದ ಆತಂಕದಿಂದ ತುಸು ನಿರಾಳರಾಗಿದ್ದ ಜಿಲ್ಲೆಯ ಜನರಿಗೆ ಮತ್ತೊಂದು ರೂಪದಲ್ಲಿ ಸರ್ಕಾರ ಕತ್ತಿ ಬೀಸಲು ಮುಂದಾಗಿರುವುದು ಮತ್ತೊಮ್ಮೆ ರೈತಾಪಿ ಜನರು ಭೂಸ್ವಾಧೀನ ಗುಮ್ಮನ ಆತಂಕ ಎದುರಿಸುವಂತಾಗಿದೆ.
ಹೌದು! ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕಾ ವಲಯ ನಿರ್ಮಾಣಕ್ಕೆ ರೂಪುರೇಷೆ ಸಿದ್ದವಾಗುತ್ತಿದೆ ಎನ್ನಲಾಗಿದ್ದು ಇದಕ್ಕಾಗಿ ಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ ಎಂಬ ಮಾತು ಹರಿದಾಡುತ್ತಿದೆ. ಈಗಾಗಲೇ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಸಾವಿರಾರು ಎಕರೆ ಜಮೀನು ಸ್ವಾಧೀನಕ್ಕೆ ಮುಂದಾಗಲಾಗಿದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಪ್ರತಿಭಟನೆ ನಡೆದಿದೆ. ಇದೇ ಹೋಬಳಿಯಲ್ಲಿ ಕಸ ವಿಲೇವಾರಿ ಘಟಕ ಆರಂಭಿಸುವ ಸರ್ಕಾರದ ಹುನ್ನಾರಕ್ಕೆ ಬೇಸತ್ತ ಜನರು ಧರಣಿ ಪ್ರತಿಭಟನೆ ನಡೆಸಿ ಆಕ್ರೋಶದಿಂದ ಕುದಿಯುತ್ತಿದ್ದಾರೆ. ಏತನ್ಮಧ್ಯೆ ಹೊಸದಾಗಿ 2100 ಎಕರೆ ಕೃಷಿ ಭೂಮಿ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ ಎಂಬ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸರ್ಕಾರ ವಿರುದ್ಧ ಸಮರಕ್ಕೆ ಸಿದ್ದರಾಗುತ್ತಿದ್ದಾರೆ.
ಪಂಚ ಗ್ರಾಮಗಳ ಮೇಲೆ ಕಣ್ಣು:
ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ ಹಾಗೂ ನಾರನಹಳ್ಳಿ ಗ್ರಾಮಗಳು ಸರ್ಕಾರದ ಹಿಟ್ ಲಿಸ್ಟ್‌ನಲ್ಲಿದ್ದು, ಇಷ್ಟು ಗ್ರಾಮದಲ್ಲಿ ದೇವಸ್ಥಾನ, ಶಾಲೆಗಳು, ಕೆರೆಯ ಅಂಗಳ ಸೇರಿ ಲವತ್ತಾದ ಕೃಷಿಭೂಮಿ ಸರ್ಕಾರದ ಕಪಿಮುಷ್ಟಿಗೆ ಸಿಲುಕಲಿದೆ ಎಂಬ ಆತಂಕ ಎದುರಾಗಿದೆ.
ಜಾಲತಾಣಗಳಲ್ಲಿ ಹರಿದಾಟ:
ಈ ಭೂಮಿ ಕ್ವೀನ್‌ಸಿಟಿ ಯೋಜನೆಗೆ ಭೂಸ್ವಾಧೀನವಾಗಿರುವ ಪ್ರದೇಶಕ್ಕೆ ಸುಮಾರು 4 ಕಿ.ಮೀ ಅಂತರದಲ್ಲಿದ್ದು, ಖಾಲಿ ಜಮೀನುಗಳಾಗಿವೆ ಆದ್ದರಿಂದ ಈ ಭೂಪ್ರದೇಶ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿದೆ ಎಂಬ ವರದಿ ಸಿದ್ದವಾಗಿದೆ ಎನ್ನಲಾಗಿದ್ದು, ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರೈತಾಪಿ ಜನರಲ್ಲಿ ಕಿಚ್ಚು ಮೂಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವುದು, ಸುಧಾರಿತ ರಸ್ತೆ ಮೂಲಸೌಕರ್ಯವಿರುವುದು, ವಿಶೇಷವಾಗಿ ದಾಬಸ್‌ಪೇಟೆ ಹೊಸಕೋಟೆ ನಡುವಿನ ಉದ್ದಕ್ಕೂ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾತಾವರಣವಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದು ಸರ್ಕಾರ ಭೂಸ್ವಾಧೀನಕ್ಕೆ ಆಸಕ್ತಿವಹಿಸಿದೆ ಎನ್ನಲಾಗಿದ್ದು ಈ ಮಾಹಿತಿ ಹಿನ್ನೆಲೆಯಲ್ಲಿ ರೈತರು ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಕೃಷಿ ಭೂಮಿ ಮೇಲೇಕೆ ಕಣ್ಣು?
ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಅವಶ್ಯಕವಾಗಿದೆ, ಆದರೆ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗಾಗಿ ಲವತ್ತಾದ ಕೃಷಿ ಭೂಮಿ ಮೇಲೇಕೆ ಕಣ್ಣಾಕುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಹಣ್ಣು, ತರಕಾರಿ, ರೇಷ್ಮೆ, ಹೈನುಗಾರಿಕೆ ಸೇರಿ ಪ್ರಮುಖ ಕೃಷಿ ಚಟುವಟಿಕೆಗಳು ನಡೆಯುತ್ತಿವೆ, ಲವತ್ತಾದ ಭೂಮಿ ಇದೆ ಇಂಥ ಭೂಮಿಯನ್ನು ಕಸಿದುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ,ಕೃಷಿ ಹಾಗೂ ಹೈನುಗಾರಿಕೆ ನಂಬಿ ಬದುಕುತ್ತಿರುವ ರೈತಾಪಿ ಜನರನ್ನು ಬೀದಿಗೆ ತಳ್ಳುವ ಹುನ್ನಾರವಾಗಿದೆ. ಪ್ರಭಾವಿಗಳ ಹಿತಾಸಕ್ತಿಗಾಗಿ ಈ ಕೃತ್ಯಕ್ಕೆ ಮುಂದಾಗಲಾಗುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಹೋಬಳಿ ಹೆದ್ದಾರಿ ಪಕ್ಕದಲ್ಲಿರುವುದರಿಂದ ಪ್ರಭಾವಿಗಳು ನಮ್ಮ ಜಮೀನುಗಳ ಮೇಲೆ ಕಣ್ಣು ಹಾಕುತ್ತಿದ್ದಾರೆ. ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರ ಇಲ್ಲಿನ ದೇವಸ್ಥಾನ, ಶಾಲೆ, ಕೆರೆವಲಯಗಳನ್ನೂ ಬಿಟ್ಟಿಲ್ಲ. ಲವತ್ತಾದ ಕೃಷಿಭೂಮಿಯನ್ನು ಕಿತ್ತುಕೊಂಡು ರೈತರನ್ನು ಅನಾಥರನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆ. ಭೂಸ್ವಾಧೀನದ ಬಗ್ಗೆ ಜಾಲತಾಣಗಳಲ್ಲಿ ಸರ್ಕಾರಕ್ಕೆ ಪತ್ರ ಬರೆದಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದೆ ಈ ಬಗ್ಗೆ ಹೋರಾಟಕ್ಕೆ ವೇದಿಕೆ ಸಿದ್ದಗೊಳ್ಳುತ್ತಿದೆ.
ರಾಮಕೃಷ್ಣಯ್ಯ, ಭೂಸ್ವಾಧೀನ ವಿರೋಧಿ ಹೋರಾಟ ಮುಖಂಡ, ದೊಡ್ಡಬೆಳವಂಗಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net