ವಿದ್ಯಾರ್ಥಿಗಳು ಸಂವಿಧಾನದ ಕಾನೂನು, ಹಕ್ಕುಗಳನ್ನು ಅರಿತು ಸನ್ಮಾರ್ಗದಲ್ಲಿ ನಡೆದು ಒಳ್ಳೆಯ ವಿದ್ಯಾಭ್ಯಾಸ ಪಡೆಯುವ ಮೂಲಕ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಬೇಕು. ಇದರಿಂದ ನಿಮ್ಮ ಹಾಗೂ ಕುಟುಂಬದ ಗೌರವ ಹೆಚ್ಚಾಗಲಿದೆ. ಜತೆಗೆ ಬದುಕು ಸಾಕಾರವಾಗಲಿದೆ ಎಂದು ಡಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಭಾರತ ಸಂವಿಧಾನದ ನಾಲ್ಕು ಮೂಲ ತತ್ವಗಳಾದ ನ್ಯಾಯ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನ ನ್ಯಾಯ ಸಿಗುವುದು. ಎರಡನೆಯದು ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಆಲೋಚನೆ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಉಪಾಸನೆ ಮಾಡುವ ಸ್ವಾತಂತ್ರ್ಯ ಇದೆ. ಮೂರನೆಯದು ಸಮಾನತೆ ಕಾನೂನಿನ ಮುಂದೆ ಎಲ್ಲರೂ ಸಮಾನ. ಸ್ಥಾನಮಾನ, ಅವಕಾಶದಲ್ಲಿ ಸಮಾನತೆ. ಯಾವುದೇ ವ್ಯಕ್ತಿಗೆ ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ನಾಲ್ಕನೆಯದು ಭ್ರಾತೃತ್ವ ನಾವೆಲ್ಲರೂ ಭಾರತೀಯರು ಎಂಬ ಸಹೋದರ ಭಾವನೆ. ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ, ಅಖಂಡತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಈ ಎಲ್ಲಾ ಸಂವಿಧಾನದ ಅವಕಾಶಗಳಿಂದ ನಾವೆಲ್ಲರೂ ಈ ಸ್ಥಾನದಲ್ಲಿ ನಿಂತಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸಂವಿಧಾನವು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾದದ್ದು ಅಲ್ಲ, ಸಂವಿಧಾನದ ಪ್ರತಿಯೋಬ್ಬರ ಹಕ್ಕು. ಎಲ್ಲರಿಂದ, ಎಲ್ಲರಿಗಾಗಿ, ಎಲ್ಲರಿಗೊಸ್ಕರ ಪ್ರಜಾಪ್ರಭುತ್ವ ಇರುವುದು. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ನಾವು, ನೀವೆಲ್ಲರೂ ಮಾಡಬೇಕು ಎಂದು ತಿಳಿಸಿದರು.