ಭೂಗತ ಕೇಬಲ್​ ಅಕ್ರಮ ಅಳವಡಿಕೆ

* ರಸ್ತೆ ಹಾಳು ಮಾಡುತ್ತಿದ್ದವರ ವಿರುದ್ಧ ಜನರ ಆಕ್ರೋಶ * ಪೊಲೀಸರಿಗೆ ದೂರು
ಹೊಸಕೋಟೆ ಎಂ.ವಿ ಬಡಾವಣೆಯ ಟೌನ್​ ಬ್ಯಾಂಕ್​ ಮುಂಭಾಗ ಖಾಸಗಿ ಸಂಸ್ಥೆಯವರು ರಸ್ತೆಯನ್ನು ಅಕ್ರಮವಾಗಿ ಅಗೆಯುತ್ತಿರುವುದು.
ಹೊಸಕೋಟೆ ಎಂ.ವಿ ಬಡಾವಣೆಯ ಟೌನ್​ ಬ್ಯಾಂಕ್​ ಮುಂಭಾಗ ಖಾಸಗಿ ಸಂಸ್ಥೆಯವರು ರಸ್ತೆಯನ್ನು ಅಕ್ರಮವಾಗಿ ಅಗೆಯುತ್ತಿರುವುದು.
Published on: 

ಹೊಸಕೋಟೆ : ನಗರದ ಎಂ.ವಿ.ಬಡಾವಣೆಯ ಗಣಗಲು ರಸ್ತೆಯನ್ನು ಖಾಸಗಿ ಇಂಟರ್​ನೆಟ್​ ಸಂಸ್ಥೆಯು ಅನುಮತಿ ಇಲ್ಲದೆ ಅಗೆದು ಭೂಗತ ಕೇಬಲ್​ ಅಳವಡಿಕೆ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್​ ಉಂಟಾಗುತ್ತಿದೆ ಎಂದು ಬಡಾವಣೆ ನಿವಾಸಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾರ ಅನುಮತಿ ಪಡೆದು ರಸ್ತೆ ಅಗೆಯುತಿದ್ದೀರಿ? ಈ ರಸ್ತೆಗೆ ಒಂದೂವರೆ ತಿಂಗಳ ಹಿಂದೆಯಷ್ಟೇ ಡಾಂಬರು ಹಾಕಿದ್ದಾರೆ. ಈಗ ಹಾಳು ಮಾಡುತ್ತಿದ್ದೀರಾ? ಎಂದು ಕೆಲಸಗಾರರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಾಗ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆಕ್ರೋಶಗೊಂಡ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಯಾವುದೇ ಅನುಮತಿ ಇಲ್ಲದೆ ಕೇಬಲ್​ ಅಳವಡಿಸುತ್ತಿರುವುದು ಗೊತ್ತಾಗಿದೆ. ಕೂಡಲೇ ಸಾರ್ವಜನಿಕರು ಪೊಲೀಸ್​ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ, ಟ್ರಾಫಿಕ್​ ಜಾಮ್​ ಹಾಗೂ ನೀರಿನಪೈಪ್​ ಒಡೆದಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಶಶಿ ಎಂಬ ಗುತ್ತಿದೆದಾರ ನಗರಸಭೆಯ ಸದಸ್ಯರಿಂದ ಅನುಮತಿ ಪಡೆದಿರುವುದಾಗಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ನಗರಸಭೆಗೆ ಮಾಹಿತಿ ನೀಡಿದ್ದಾರೆ.

ನಗರಸಭೆಯ ಜೆಇ ವೆಂಕಟೇಶ್​ ಮಾತನಾಡಿ, ನಗರದ ನೀರಗಂಟಿಗಳು ಈ ಸಂಬಂಧ ಮಾಹಿತಿ ನೀಡಿದ್ದು, ಕೂಡಲೇ ಕೆಲಸ ನಿಲ್ಲಿಸುವಂತೆ ಸೂಚಿಸಲಾಗಿದೆ. ಒಡೆದುಹೋದ ನೀರಿನ ಪೈಪ್​ಗಳನ್ನು ಸರಿಪಡಿಸಲಾಗುತ್ತಿದೆ. ಅಲ್ಲದೇ ನಗರಸಭೆ ಆಯುಕ್ತರು ಖಾಸಗಿ ಸಂಸ್ಥೆಯವರು ರಸ್ತೆ ಅಗೆಯಲು ಬಳಸುತ್ತಿದ್ದ ಯಂತ್ರಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net