ವಿದ್ಯಾರ್ಥಿನಿಲಯ ಜಾಗಕ್ಕೆ ಅಕ್ರಮ ಇ-ಸ್ವತ್ತು?

Illegal e-asset?
Illegal e-asset?
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿದ್ಯಾರ್ಥಿನಿಯಲಕ್ಕೆ ಮಂಜೂರಾಗಿರುವ ಜಾಗವನ್ನು ಅಕ್ರಮವಾಗಿ ಖಾಸಗಿಯವರಿಗೆ ಇ-ಸ್ವತ್ತು ಮಾಡಿಕೊಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆಗೆ ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೂಲಿಬೆಲೆ ಸರ್ವೇ ನಂ.10ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಯಲಕ್ಕೆ ಮಂಜೂರಾಗಿರುವ ಜಾಗಕ್ಕೆ ಅಕ್ರಮವಾಗಿ ಗ್ರಾಪಂನಿಂದ ನಿವೇಶನ ಇ-ಸ್ವತ್ತು ದಾಖಲೆ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿನೋದಾ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಖಾಲಿ ಜಾಗಕ್ಕೆ ಅಕ್ರಮ ಖಾತೆ:
1 ಎಕರೆ ಜಾಗವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾಗಿದ್ದು, 2023 ಡಿ.6ರಂದು ಈ ಜಮೀನು ಸರ್ವೇ ಮಾಡಿ ಹದ್ದುಬಸ್ತು ಮಾಡಲಾಗಿತ್ತು. 2024ರಲ್ಲಿ ಅಂದಿನ ಪ್ರಭಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದೇಶ್ ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡಿಸಿದ್ದರು. ಪಶ್ಚಿಮಕ್ಕೆ ಖಾಲಿ ಬಿಟ್ಟು ಕಾಂಪೌಂಡ್ ಹಾಕಲಾಗಿತ್ತು. ಖಾಲಿ ಬಿಟ್ಟ ಜಾಗಕ್ಕೆ ನಿವೇಶನವೆಂದು ಅರ್ಜಿ ಸಲ್ಲಿಸಿದ ಭೂಗಳ್ಳರಿಗೆ ಗ್ರಾಪಂ ಅಧಿಕಾರಿಗಳು ಇ-ಸ್ವತ್ತು ಮಾಡಿಕೊಟಿದ್ದಾರೆ ಎನ್ನಲಾಗಿದೆ.
ಜಾಗ ಬಿಟ್ಟಿದ್ದು ಯಾಕೆ?
ಸರ್ಕಾರ ಮಂಜೂರು ಮಾಡಿರುವ 1 ಎಕರೆ ಜಾಗಕ್ಕೆ ಪ್ರಭಾರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಾಂಪೌಂಡ್ ಹಾಕಿಸದೆ ಖಾಲಿ ಜಾಗ ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ಅವರು ಜಾಗ ಬಿಟ್ಟ ಕಾರಣ ಅದನ್ನು ಒತ್ತುವರಿ ಮಾಡಲು ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮೆಟ್ರಿಕ್ ನಂತರ ಬಾಲಕಿಯರ ಜಮೀನು ಸೇರಿದಂತೆ ಅದರ ಪಕ್ಕದಲ್ಲಿ ಖಾಲಿಯಿರುವ ಸರ್ಕಾರಿ ಗೋಮಾಳ ಜಮೀನಿಗೆ ಸ್ಥಳೀಯ ಗ್ರಾಪಂನಲ್ಲಿ 20ಕ್ಕೂ ಹೆಚ್ಚು ನಿವೇಶನಗಳಿಗೆ ಅಕ್ರಮವಾಗಿ ಇ-ಸ್ವತ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮತ್ತೊಮ್ಮೆ ಹದ್ದುಬಸ್ತು ಮಾಡಲು ಅರ್ಜಿ:
ಹಾಸ್ಟೆಲ್ ಜಾಗ ಅಕ್ರಮ ಪ್ರಕರಣ ಹೊರಗೆ ಬರುತ್ತಿದ್ದಂತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿ ಹಾಸ್ಟೆಲ್ ಜಾಗವನ್ನು ಮತ್ತೊಮ್ಮೆ ಸರ್ವೇ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಭೂಗಳ್ಳರ ಪಾಲು?
ಹಾಸ್ಟಲ್ ಜಾಗದ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಾಗವನ್ನು ಕೆಲವು ವರ್ಷಗಳಿಂದ ನಿವೇಶನಗಳಿಗೆ ಮಂಜೂರಾಗಿವೆ ಎಂದು ಹೇಳಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ 20 ಕ್ಕೂ ಹೆಚ್ಚು ಇ-ಸ್ವತ್ತು ದಾಖಲೆಗಳನ್ನು ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರತಿ ನಿವೇಶನ ಸರಾಸರಿ 10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳಲಿದ್ದು,ಸುಮಾರು 200 ಕೋಟಿ ರೂ. ಹೆಚ್ಚು ಬೆಲೆ ಬಾಳುವ ಜಾಗ ಭೂಗಳ್ಳರ ಪಾಲಾಗಿದೆ ಎನ್ನಲಾಗಿದೆ.
ಸರ್ಕಾರಿ ಹಾಸ್ಟೆಲ್ ಜಾಗವನ್ನು ಮತ್ತೊಮ್ಮೆ ಸರ್ವೇ ಮಾಡಿಸಿ ಜಮೀನು ಹದ್ದು ಬಸ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಿಯಾದರೂ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಮಾಹಿತಿ ಇದ್ದರೆ ತಕ್ಷಣ ಗಮನಕ್ಕೆ ತರಬಹುದು.
ಕೆ.ಎಸ್ ಸೋಮಶೇಖರ್, ತಹಸೀಲ್ದಾರ್ ಹೊಸಕೋಟೆ
ಹಾಸ್ಟೆಲ್ ಖಾಲಿ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಂಡು ಮತ್ತೊಮ್ಮೆ ಜಮೀನು ಹದ್ದುಬಸ್ತು ಮಾಡುವಂತೆ ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಅಕ್ರಮವಾಗಿ ಇ-ಖಾತಾ ಆಗಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು.
ವಿನೋದ, ತಾಲೂಕು ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net