ಚರಿತ್ರೆಯಲ್ಲಿ ಕೆಂಪೇಗೌಡರು ಅಜರಾಮರ

hosakote kempegowda jayanti
hosakote kempegowda jayanti
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವ, ರಾಜಕೀಯ ನೈಪುಣ್ಯತೆ, ಅಭಿವೃದ್ದಿಯ ಮುನ್ನೋಟ, ವ್ಯವಹಾರಿಕ ಮನೋಭಾವ, ಕಲೆಗೆ ನೀಡಿದ ಪ್ರೋತ್ಸಾಹ ಮತ್ತಿತರ ಅಂಶಗಳಿಂದ ಚರಿತ್ರೆಯ ಪುಟಗಳಲ್ಲಿ ಅವರು ಅಜರಾಮರಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಬಣ್ಣಿಸಿದರು.
ಹೊಸಕೋಟೆ ನಗರದಲ್ಲಿ ಶನಿವಾರ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪನೆ ನೆರವೇರಿಸಿ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಕೆಂಪೇಗೌಡರು ಸುಮಾರು 489 ವರ್ಷದ ಹಿಂದೆ ಕನಸಿನ ಬೆಂಗಳೂರನ್ನು ಕಟ್ಟಿ ಬೆಳೆಸಿದರು. ಸುಮಾರು ಮೂವತ್ತೆಂಟು ವರ್ಷ ದೀರ್ಘ ಆಳ್ವಿಕೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಅವರ ದೂರದೃಷ್ಟಿಯ ಪರಿಶ್ರಮದಿಂದಾಗಿ ಅಂದಿನ ಬೆಂದಕಾಳೂರು ಬೆಂಗಳೂರಾಗಿ ಬೆಳೆದು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಬೆಂಗಳೂರು ನಗರವೂ ಒಂದಾಗಲೂ ಕಾರಣೀಭೂತರಾಗಿರುತ್ತಾರೆ. ಈ ಮಹಾನ್ ಸಾಧಕರ ಸಾಧನೆಗಳು ಅವರನ್ನು ಚಿರಂಜೀವಿಯನ್ನಾಗಿಸಿದೆ ಹಾಗೂ ಅವರ ದಿವ್ಯಸ್ಮರಣೆ ಎಂದೆಂದಿಗೂ ಅಪೇಕ್ಷಣೀಯ ಎಂದು ಹೇಳಿದರು. ಬೆಂಗಳೂರು ಅಂದಿನ ಕಾಲದಲ್ಲೂ ಒಂದು ಪ್ರಮುಖ ವಾಣಿಜ್ಯ ಕೆಂದ್ರವಾಗಿತ್ತು. ಇಂದೂ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇದಕ್ಕೆ ಕಾರಣ ಕೆಂಪೇಗೌಡರ ದೂರದರ್ಶಿತ್ವ. ಅವರ ವಿವೇಚನಾಯುತ ಯೋಜನೆಯಿಂದಾಗಿ ಇಂದಿಗೂ ನಾಡಿನ ಜನರು ಅವರನ್ನು ನೆನೆಯುತ್ತಿರುತ್ತಾರೆ ಎಂದರು. ಕೆಂಪೇಗೌಡರ ಹೆಸರು ಬೆಂಗಳೂರಿನ ಜತೆ ಬೆಸೆದುಕೊಂಡಿದೆ. ಈ ಅವಿನಾಭಾವ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ಇಡೀ ರಾಜ್ಯಕ್ಕೆ ಕೆಂಪೇಗೌಡರ ಬದುಕು, ಸಾಧನೆ ಹಾದಿಯನ್ನು ತೆರೆದಿಡಬೇಕು ಎಂದು ಅಭಿಪ್ರಾಯಪಟ್ಟರು.
4 ದಿಕ್ಕುಗಳಲ್ಲಿ ಗೋಪುರ:
ಕೆಂಪೇಗೌಡರು ಅಂದು ನಾಲ್ಕು ದಿಕ್ಕುಗಳಲ್ಲಿ ಗೋಪುರ ನಿರ್ಮಿಸಿ ಬೆಂಗಳೂರು ಅಲ್ಲಿಯವರೆಗೆ ಬೆಳೆಯಬಹುದು ಎಂಬ ದೂರದೃಷ್ಟಿ ಹೊಂದಿದ್ದರು. ಕೆಂಪೇಗೌಡರ ಹೆಸರು ಬೆಂಗಳೂರಿನ ಜತೆ ಬೆಸೆದುಕೊಂಡಿದೆ. ಈ ಅವಿನಾಭಾವ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ಇಡೀ ರಾಜ್ಯಕ್ಕೆ ಕೆಂಪೇಗೌಡರ ಬದುಕು, ಸಾಧನೆ ಹಾದಿಯನ್ನು ತೆರೆದಿಡಬೇಕು ಎಂದು ಹೊಸಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕಹುಲ್ಲೂರು ಸತೀಶ್ ಹೇಳಿದರು.
ಮುಂದಿನ ಚುನಾವಣೆಗೆ ಎಂಟಿಬಿ ಸ್ಪರ್ಧೆ..?
ಮೂರು ಬಾರಿ ಶಾಸಕನಾಗಿ, ಮಂತ್ರಿಯಾಗಿ ಈಗ ವಿಧಾನಪರಿಷತ್ ಸದಸ್ಯನಾಗಿ ಹೊಸಕೋಟೆಗೆ ನಾನೇನು ಮಾಡಿದ್ದೇನೆ ಎಂಬುದು ಜನರಿಗೆ ತಿಳಿಯಲಿ, ಎಂಟಿಬಿ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯ ಹೊಸಕೋಟೆ ಅಭಿವೃದ್ಧಿ ಹೇಗಿತ್ತು? ಈಗಿನ ಆಡಳಿತ ಹೇಗಿದೆ ಎಂಬುದು ಗೊತ್ತಾಗಲಿ ಎಂದು ಸುಮ್ಮನಿದ್ದೇನೆ. ಕಾಲ ಬಂದಾಗ ಉತ್ತರ ಕೊಡುತ್ತೇನೆ. ಕಾಲಾಯ ತಸ್ಮೈ ನಮಃ ಎನ್ನುವಂತೆ ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಪರೋಕ್ಷವಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಸುಳಿವು ಬಿಟ್ಟಿಕೊಟ್ಟಿದ್ದು, ತಾಲೂಕು ಬಿಜೆಪಿ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿತು. ಹಿಂದೆಯೂ ಬಂದಿದ್ದೆ ಈಗಲೂ ಬಂದಿದ್ದೇನೆ ಮುಂದೇಯೂ ಬರುತ್ತೇನೆ ಎನ್ನುತ್ತಿದ್ದಂತೆ ಬಿಜೆಪಿ ಮುಖಂಡರು ಚಪ್ಫಾಳೆ ತಟ್ಟಿ ಜೈೋಷ ಹಾಕಿದರು. ಕಳೆದ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಹೊಸಕೋಟೆ ರಾಜಕೀಯದಿಂದ ಅಂತರ ಕಾಯ್ದುಕೊಂಡಂತಿರುವ ಮಾಜಿ ಸಚಿವರ ಈ ಒಗಟಿನ ಸಂದೇಶ ಮುಂದಿನ ಚುನಾವಣೆಗೆ ಬಿಜೆಪಿ ಪಡೆ ಸನ್ನದ್ಧುಗೊಳ್ಳಲು ಹಸಿರು ನಿಶಾನೆ ತೋರಿದಂತಾಗಿದೆ ಎಂದು ಸ್ಥಳೀಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net