ಹೆದ್ದಾರಿಗಳಲ್ಲಿ ವಾಹನಗಳ ಅನಧಿಕೃತ ನಿಲುಗಡೆ!

highway parking
highway parking
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ರಸ್ತೆಗಳು ಹಾಗೂ ಸರ್ವಿಸ್​ ರಸ್ತೆಗಳು ಸರಕು ಸಾಗಣೆ ವಾಹನಗಳ ಅನಧಿಕೃತ ನಿಲುಗಡೆ ತಾಣವಾಗಿ ಬಳಕೆಯಾಗುತ್ತಿದ್ದು ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿರುವುದರ ಜತೆಗೆ ಅಪಘಾತಗಳಿಗೂ ಕಾರಣವಾಗುತ್ತಿವೆ.
ಜಿಲ್ಲೆಯಲ್ಲಿನ ಹೆದ್ದಾರಿಗಳಲ್ಲಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದ್ದು, ಸಾಕಷ್ಟು ಪ್ರಾಣಹಾನಿಗಳೂ ಸಂಭವಿಸುತ್ತಿವೆ. ನಿಲುಗಡೆ ಮಾಡಿದ ವಾಹನಗಳಿಗೆ ಹಿಂದಿನಿಂದ ಬಂದು ಡಿಕ್ಕಿಯೊಡೆಯುವ ಪ್ರಕರಣಗಳು ನಡೆಯುತ್ತಿವೆ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳು ಹಾಗೂ ಹೊರವಲಯಗಳಲ್ಲಿ ವೇರ್​ಹೌಸ್​ಗಳು ವಿಸ್ತಾರಗೊಳ್ಳುತ್ತಿರುವ ನಡುವೆಯೇ ಲಾರಿ ಮತ್ತಿತರ ಬೃಹತ್​ ವಾಹನಗಳ ಅನಧಿಕೃತ ನಿಲುಗಡೆ ಪ್ರಮಾಣವೂ ಹೆಚ್ಚುತ್ತಿದೆ. ಇದರಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಅಪಘಾತಗಳ ಹಾಟ್​ಸ್ಪಾಟ್​ ಆಗಿ ಬದಲಾಗುತ್ತಿವೆ.
ವಾರಗಟ್ಟಲೆ ವಾಹನಗಳ ನಿಲುಗಡೆ:
ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ಮೂಲಕ ಹಾದು ಹೋಗುವ ಹೆದ್ದಾರಿಗಳಲ್ಲಿ ಲಾರಿ, ಕಂಟೇನರ್​, ಟ್ಯಾಂಕರ್​ಗಳು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ ಹಲವು ವೇಳೆ ಭಾರಿ ವಾಹನಗಳು ವಾರಗಟ್ಟಲೆ ನಿಲುಗಡೆಯಾಗುವ ದೃಶ್ಯಗಳು ಕಂಡುಬರುತ್ತಿವೆ. ದೇವನಹಳ್ಳಿ ಭಾಗದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳುವ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಹಲವು ವೇಳೆ ವಾಹನಗಳ ಸುಗಮ ಸಂಚಾರಕ್ಕೂ ತೊಂದರೆಯಾಗುತ್ತಿದೆ. ನಿಲುಗಡೆ ಮಾಡಿರುವ ಭಾರಿ ವಾಹನಗಳನ್ನು ದಿಢೀರ್​ ಚಾಲನೆ ಮಾಡುತ್ತಾ ಹೆದ್ದಾರಿಗೆ ಬರುವುದರಿಂದ ಇನ್ನಿತರ ವಾಹನಗಳ ಸವಾರರು ಗಾಬರಿಗೊಂಡು ಅಪಘಾತಕ್ಕೆ ಒಳಗಾಗುವ ಸನ್ನಿವೇಶಗಳು ಕಂಡುಬರುತ್ತಿವೆ.
ಸರ್ವಿಸ್​ ರಸ್ತೆಗಳಂತೂ ಮಾಮೂಲು:
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಿ ಸರ್ವಿಸ್​ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ, ಸ್ಥಳಿಯ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಕವಾಗಿರಬೇಕಾದ ರಸ್ತೆಗಳು ಭಾರಿ ವಾಹನಗಳ ನಿಲುಗಡೆ ತಾಣವಾಗಿ ಬದಲಾಗುತ್ತಿದೆ. ಸರ್ವಿಸ್​ ರಸ್ತೆಗಳೆಂದರೆ ಇನ್ನಿತರ ವಾಹನ ಸವಾರರಿಗೆ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ವಾಹನಗಳ ಅನಧಿಕೃತ ನಿಲುಗಡೆ ತಲೆಬೇನೆ ತರಿಸುತ್ತಿದೆ.
ಹೆದ್ದಾರಿ ಸುರಕ್ಷತೆ ನೇಪಥ್ಯ:
ಕೆಲವು ತಿಂಗಳ ಹಿಂದಷ್ಟೇ ಹೊಸಕೋಟೆ ಭಾಗದ ಹೆದ್ದಾರಿಯಲ್ಲಿ ಬಸ್​ಗೆ ಡಿಕ್ಕಿಯಾಗಿ ಬೈಕ್​ ಸವಾರ ಪತ್ನಿ ಹಾಗೂ ಬಾಲಕಿ ಮೃತಪಟ್ಟಿದ್ದರು. ಈ ಭಾಗದಲ್ಲಿ ಭಾರಿ ವಾಹನ ನಿಲುಗಡೆಯಿಂದ ಎದುರು ಬರುತ್ತಿದ್ದ ಬಸ್​ ಕಾಣದೆ ಅಪಘಾತ ಸಂಭವಿಸಿದೆ ಎಂದು ಸ್ಥಳಿಯರು ದೂರಿದ್ದರು. ಬಳಿಕ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸರು ಹೆದ್ದಾರಿಗಳಲ್ಲಿ ಅನಧಿಕೃತ ಪಾರ್ಕಿಂಗ್​ಗೆ ಕಡಿವಾಣ ಹಾಕುವುದಾಗಿ ತಿಳಿಸಿದ್ದರು. ಕೆಲವು ದಿನ ವಾಹನಗಳ ತೆರವು ಮಾಡಿದಂತೆ ಕಂಡುಬಂದರು ಮತ್ತೆ ಯಥಾಸ್ಥಿತಿ ಮುಂದುವರೆದಿದೆ.
ತಿರುವುಗಳಲ್ಲೂ ನಿಲುಗಡೆ:
ಸರ್ವೀಸ್​ ರಸ್ತೆಯ ಬದಿಗಳಲ್ಲಿ ಭಾರಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಲಭ್ಯವಿರುವ ರಸ್ತೆ ಮತ್ತಷ್ಟು ಕಿರಿದಾಗುತ್ತಿದೆ. ಎದುರು&ಬದುರು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅದೇ ರಸ್ತೆಗಳಲ್ಲಿನ ತಿರುವುಗಳಲ್ಲೂ ಲಾರಿಗಳನ್ನು ನಿಲುಗಡೆ ಮಾಡುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಾರ್ವಜನಿಕರ ಆತಂಕವಾಗಿದೆ, ಇನ್ನು ರಾತ್ರಿ ವೇಳೆ ನಿಲುಗಡೆ ಮಾಡುವ ವಾಹನಗಳ ಪ್ರತಿಫಲಕ ದೀಪಗಳು ಕಾರ್ಯನಿರ್ವಹಿಸದಿರುವುದು, ಹಲವು ಕಡೆ ರಸ್ತೆ ದೀಪಗಳ ಕೊರತೆ ಹಾಗೂ ಮಳೆ ಸಂದರ್ಭದಲ್ಲಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್​, ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ಇಂಥ ಅನಧಿಕೃತ ಪಾರ್ಕಿಂಗ್​ ತೊಂದರೆ ಉಂಟು ಮಾಡುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ.
ಪಾರ್ಕಿಂಗ್​ ಜತೆಗೆ ಕಸದ ರಾಶಿ:
ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ಮಾಡುವ ಚಾಲಕರು ರಸ್ತೆ ಬದಿಯನ್ನು ಕಲುಷಿತಗೊಳಿಸುತ್ತಿರುವ ಸನ್ನಿವೇಶಗಳು ಸಾಮಾನ್ಯವಾಗಿವೆ. ದಿನಗಟ್ಟಲೆ ವಾಹನ ನಿಲುಗಡೆ ಮಾಡುವ ಚಾಲಕರು ಆಹಾರ ತ್ಯಾಜ್ಯ, ಪ್ಲಾಸ್ಟಿಕ್​ ಬಾಟಲಿಗಳು, ಗುಟ್ಖಾ ಪ್ಯಾಕೇಟ್​, ಬೀಡಿ&ಸಿಗರೇಟ್​ ತುಂಡುಗಳನ್ನು ಎಸೆಯುವುದರಿಂದ ಸರ್ವಿಸ್​ ರಸ್ತೆಗಳಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗುತ್ತಿದೆ. ಅಲ್ಲದೆ ಚಾಲಕ ಹಾಗೂ ಕ್ಲೀನರ್​ಗಳು ರಸ್ತೆ ಬದಿ ಜಾಗಗಳಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ಸರ್ವಿಸ್​ ರಸ್ತೆಗಳಲ್ಲಿ ಅನೈರ್ಮಲ್ಯ ಕಂಡುಬರುತ್ತಿದೆ.
ಹೆದ್ದಾರಿ ರಸ್ತೆಗಳು ಹಾಗೂ ಸರ್ವಿಸ್​ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಅಂಥವರಿಗೆ ದಂಡ ವಿಧಿಸಿ ಮತ್ತೊಮ್ಮೆ ನಿಲುಗಡೆ ಮಾಡದಂತೆ ಎಚ್ಚರಕೆ ನೀಡಲಾಗುತ್ತಿದೆ. ಕಾಫಿ&ಟೀ ಸೇವನೆ, ಉಪಹಾರಕ್ಕಾಗಿ ರಸ್ತೆ ಬದಿಗಳಲ್ಲಿ ಅಂತರಾಜ್ಯ ವಾಹನಗಳ ನಿಲುಗಡೆ ಕಂಡುಬರುತ್ತಿದೆ, ಇಂಥ ವಾಹನಗಳ ಚಾಲಕರನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಸಂಚಾರ ಸುರಕ್ಷತೆಗೆ ಸಂಬಂಧಪಟ್ಟಂತೆ ಇಲಾಖೆಗೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
> ಪಾಂಡುರಂಗ, ಡಿವೈಎಸ್​ಪಿ ದೊಡ್ಡಬಳ್ಳಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net