1098 ಸಹಾಯವಾಣಿಗೆ 346 ಕರೆ

helpline
helpline
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸಂಕಷ್ಟದಲ್ಲಿರುವ ಅಥವಾ ತೊಂದರೆಯಲ್ಲಿರುವ 18 ವರ್ಷ ವಯೋಮಾನದೊಳಗಿರುವ ಮಕ್ಕಳ
ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಮಕ್ಕಳಿಗೆ ಪೋಷಣೆ ಹಾಗೂ ರಕ್ಷಣೆ ಒದಗಿಸುವ ದಿನದ 24 ಗಂಟೆ ಉಚಿತ ತುರ್ತು ದೂರವಾಣಿ ಸೇವೆಯಾಗಿರುವ ಮಕ್ಕಳ ಸಹಾಯವಾಣಿಗೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
ಕಳೆದ 1 ವರ್ಷದ ಅವಧಿಯಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕರು, ಶಾಲೆಯಿಂದ ಹೊರಗುಳಿದ ಮಕ್ಕಳು ಸೇರಿ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ 346 ಕರೆಗಳು ಬಂದಿದ್ದು, ಇಷ್ಟೂ ಕರೆಗಳಿಗೆ ತಕ್ಷಣ ಸ್ಪಂದಿಸಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿಕೊಂಡು ನೆರವಿಗೆ ದಾವಿಸಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ ಮತ್ತು ಮಕ್ಕಳಿಗೆ ಯಾವುದೇ ಸಮಸ್ಯೆ ಬಂದಾಗ ಸಮಸ್ಯೆ ಬಗೆಹರಿಸಲು ಸಹಾಯವಾಣಿ ಪ್ರಾರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿದ್ದು, ಇಲಾಖೆಗಳು ಅಲರ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿವೆ.
ವಿಶೇಷ ಕರೆಗಳೂ ಬರುತ್ತವೆ:
ಬಾಲ್ಯವಿಹಾಹ ಮಾಡುತ್ತಿದ್ದಾರೆ, ಶಾಲೆಗೆ ಕಳುಹಿಸುತ್ತಿಲ್ಲ, ಕಾರ್ಖಾನೆಯಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂಬಂಥ ಗಂಭೀರ ಕರೆಗಳ ಜತೆಗೆ ಮೆಸ್ಟ್ರು ಬೈಯುತ್ತಾರೆ, ಅಪ್ಪ ಓದಲು ಒತ್ತಡ ಹಾಕುತ್ತಾರೆ, ಅಮ್ಮ ಮನೆ ಕೆಲಸ ಮಾಡಲು ಹೇಳುತ್ತಾರೆ ಓದಲು ಸಮಯ ಸಿಗುತ್ತಿಲ್ಲ ಎಂಬಂಥ ಕರೆಗಳೂ ಬರುತ್ತವೆ, ಇದರೊಂದಿಗೆ ಮಕ್ಕಳು ಮೊಬೈಲ್ ಬಿಟ್ಟರೆ ಬೇರೆನೂ ಮಾಡುತ್ತಿಲ್ಲ, ಯಾವಾಗಲೂ ಗೇಮ್ ಆಡುತ್ತಾರೆ ಏನು ಮಾಡುವುದು ಎಂಬಂಥ ಪಾಲಕರ ಕರೆಗಳು ದಾಖಲಾಗುತ್ತಿವೆ. ಆದರೆ ಇದ್ಯಾವುದನ್ನೂ ನಿರ್ಲಕ್ಷ್ಯ ಮಾಡದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಬಾಲ್ಯ ವಿವಾಹ ತಡೆಗೆ ಸಹಕಾರಿ:
ಜಿಲ್ಲೆಯ ಸಹಾಯವಾಣಿಗೆ ಬರುತ್ತಿರುವ ಕರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹದ ಕುರಿತಾದ ಕರೆಗಳು ಹೆಚ್ಚಿವೆ ಎನ್ನಲಾಗಿದೆ, ಖುದ್ದು ಮಕ್ಕಳೆ ನನಗೆ ಮದುವೆ ಇಷ್ಟ ಇಲ್ಲ, ಮನೆಯವರು ಬಲವಂತವಾಗಿ ಮದುವೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಕರೆಗಳು ಬಂದರೆ, ಸ್ಥಳೀಯರು ಅಥವಾ ವಿಷಯ ತಿಳಿದ ಸಾರ್ವಜನಿಕರು ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ, ಇದರಿಂದ ಬಾಲ್ಯವಿವಾಹದಂಥ ಅನಿಷ್ಟ ಪದ್ಧತಿ ತಡೆಗೆ ಸಹಕಾರಿಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ, ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ 12 ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು ಅಷ್ಟೂ ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆಯುವಲ್ಲಿ ಇಲಾಖೆಯಗಳು ಯಶಸ್ವಿಯಾಗಿವೆ. ಇದಕ್ಕೆ ಪ್ರಮುಖ ಕಾರಣ ಸಹಾಯವಾಣಿ ಎಂಬುದು ಅಧಿಕಾರಿಗಳ ಮಾಹಿತಿಯಾಗಿದೆ.ಮಕ್ಕಳ ಹಕ್ಕು ರಕ್ಷಣಾ ಆಯೋಗ, ಸಂಘ ಸಂಸ್ಥೆಗಳು ಕೂಡ ಅದರ ಬಗ್ಗೆ ಸಾಕಷ್ಟು ಕಾರ್ಯ ಮಾಡುತ್ತಿವೆ. ಬಾಲ್ಯವಿವಾಹದಂಥ ಅನಿಷ್ಟ ಪದ್ಧತಿ ಬಗ್ಗೆ ಸರ್ಕಾರ ಸಾಕಷ್ಟು ಪ್ರಚಾರ ಮಾಡುತ್ತಿದೆ, ಇದು ಅಪರಾಧಾ ಜೈಲು ಶಿಕ್ಷೆ ಖಚಿತ ಎಂಬ ಎಚ್ಚರಿಕೆಯನ್ನೂ ರವಾನಿಸುತ್ತಿದೆ ಅದರೂ ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೆ ಇಂಥ ಪದ್ಧತಿಗಳು ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿರುವುದರಿಂದ ಅವರಲ್ಲಿಯೂ ಈ ರೀತಿಯ ಪ್ರಯತ್ನಗಳು ಆಗುತ್ತಿವೆ. ಸಾಕಷ್ಟು ಈ ಬಗ್ಗೆ ಜಾಗೃತಿ ಮೂಡಿಸಿದರು ವಿವಿಧ ಕಾರಣಗಳನ್ನು ಮದುವೆ ಮಾಡಿ ಮುಗಿಸುವ ದಾವಂತ ಕಂಡುಬರುತ್ತಿದೆ.
8 ತಿಂಗಳಲ್ಲಿ 346 ಪ್ರಕರಣ ದಾಖಲು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 8 ತಿಂಗಳಿನಲ್ಲಿ 346 ಹೆಚ್ಚು ಕರೆಗಳು ಮಕ್ಕಳ ಸಹಾಯವಾಣಿ ಮೂಲಕ ದಾಖಲಾಗಿವೆ. ಸರ್ಕಾರ ಮಕ್ಕಳ ಸಮಸ್ಯೆಗಳಿಗೆ ಕಿವಿಯಾಗುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ 1098 ಮಕ್ಕಳ ಸಹಾಯವಾಣಿಗೆ ಅವಕಾಶ ಮಾಡಿಕೊಟ್ಟಿದೆ. ಇದರ ಭಾಗವಾಗಿ ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ವಿಶೇಷವಾಗಿ ಘಟಕ ಕಾರ್ಯ ನಿರ್ವಹಿಸುತ್ತಿದೆ.
ಯಾವ ವಿಚಾರಕ್ಕೆ ಕರೆ ಮಾಡಬಹುದು:
ಮಕ್ಕಳಿಗೆ ತುರ್ತು ವೈದ್ಯಕೀಯ ನೆರವು ಅಥವಾ ಆಶ್ರಯ ಅಗತ್ಯವಿದ್ದರೆ
ಮಗು ಕಾಣೆಯಾಗಿದ್ದರೆ ಅಥವಾ ಅನಾಥ ಮಗು ಕಂಡು ಬಂದಲ್ಲಿ
ಮಕ್ಕಳ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೆ
ಬಾಲಕಾರ್ಮಿಕ ಪದ್ಧತಿ ಅಥವಾ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ಇದ್ದರೆ
)
ಮಕ್ಕಳ ಸಹಾಯವಾಣಿಯಿಂದ ಸಾಕಷ್ಟು ಅನುಕೂಲವಾಗಿದೆ, ಮಕ್ಕಳ ರಕ್ಷಣೆಗೆ ಹೆಚ್ಚು ಸಹಕಾರಿಯಾಗಿದೆ, ತುರ್ತು ವೈದ್ಯಕೀಯ ನೆರವು ಸೇರಿ ಅನೇಕ ಪ್ರಕರಣಗಳಲ್ಲಿ ಮಕ್ಕಳ ನೆರವಿಗೆ ತಕ್ಷಣ ದಾವಿಸಲು ಸಹಾಯವಾಣಿ ಸಂಪರ್ಕ ಸೇತುವೆಯಾಗಿದೆ. ಇದರಿಂದ ಬಾಲ್ಯವಿವಾಹದಂಥ ಪ್ರಕರಣಗಳನ್ನು ತಡೆಗಟ್ಟಲು ಹೆಚ್ಚು ಸಹಕಾರಿಯಾಗಿದೆ.
ಅನಿತಾಲಕ್ಷ್ಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net