ಮೃತರ ಖಾತೆಗೆ 2 ಕೋಟಿ ರೂ.ಜಮೆ!

gruhalakshmi
gruhalakshmi
Published on
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 2 ಕೋಟಿ ರೂ.ಹಣ ಅನರ್ಹರ ಖಾತೆಗೆ ಜಮೆಯಾಗಿರುವುದು ಪತ್ತೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ಪರಿಶೀಲನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 2.18 ಲಕ್ಷ ಗೃಹಲಕ್ಷ್ಮೀ ಯೋಜನೆ ಲಾನುಭವಿಗಳಿದ್ದು, ಕಳೆದ 2 ವರ್ಷದಿಂದಿಚಿಗೆ ಮೃತಪಟ್ಟವರ ಖಾತೆಗೂ ನಿರಂತರವಾಗಿ ಹಣ ಜಮೆಯಾಗುತ್ತಿದ್ದು ಕುಟುಂಬಸ್ಥರು ಎಂಟಿಬಿ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿರುವ ವಿಷಯ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾ ಗ್ಯಾರಂಟಿ ಯೋಜನೆ ಸದಸ್ಯರು ಅರ್ಹ ಲಾನುಭವಿಗಳಿಗಷ್ಟೇ ಯೋಜನೆ ಹಣ ತಲುಪಬೇಕು ಮೃತರ ಖಾತೆಗೆ ಜಮೆಯಾಗುತ್ತಿರುವ ಹಣವನ್ನು ತಡೆಹಿಡಿಯಬೇಕು ಎಂಬ ನಿಟ್ಟಿನಲ್ಲಿ ಅನರ್ಹ ಲಾನುಭವಿಗಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
1 ತಿಂಗಳಲ್ಲಿ ಪೂರ್ಣ:
ಜಿಲ್ಲೆಯಲ್ಲಿನ ಪ್ರತೀ ಗೃಹಲಕ್ಷ್ಮೀ ಲಾನುಭವಿಗಳ ಮನೆಗೂ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು ಮತ್ತು ಮೀಟರ್ ರೀಡರ್ ಭೇಟಿ ನೀಡಿ ಸರ್ವೇಕಾರ್ಯ ಆರಂಭಿಸಿದ್ದಾರೆ, ಇವರಿಗೆ ಸಹಾಯಕರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯವಾಗಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮೃತರನ್ನು ಪತ್ತೆ ಹಚ್ಚಲಾಗುತ್ತಿದ್ದು, ಒಂದು ತಿಂಗಳ ಕಾಲಾವಧಿಯಲ್ಲಿ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.
23 ಲಕ್ಷ ರೂ.ವಾಪಸ್:
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಲಾನುಭವಿಗಳಾಗಿದ್ದು, ಈ ಪೈಕಿ ಮೃತ ಲಾನುಭವಿಗಳ ಖಾತೆ ಜಮೆಯಾಗುತ್ತಿದ್ದ ಮಾಹಿತಿ ಪತ್ತೆ ಹಚ್ಚಿಸಿರುವ ಲೀಡ್ ಬ್ಯಾಂಕ್ ಸಿಬ್ಬಂದಿ ಸುಮಾರು 23 ಲಕ್ಷ ರೂ. ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದಾರೆ. ಆದರೆ ಇದುವರೆಗೆ ಎಂಟಿಬಿ ಮತ್ತಿತರ ಮೂಲಕ ಪಡೆದಿರುವ ಹಣವನ್ನು ಪಾಪಸ್ ಪಡೆಯಲು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅಂಥ ಖಾತೆಗಳಿಗೆ ಹಣ ಜಮೆಯಾಗದಂತೆ ತಡೆಹಿಡಿಯಲಾಗುವುದು ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.
ಗೃಹಲಕ್ಷ್ಮೀ 3 ವರ್ಷದ ಸಂಭ್ರಮ:
ಗೃಹಲಕ್ಷ್ಮೀ ಯೋಜನೆ ಜು.19 ಕ್ಕೆ ಮೂರು ವರ್ಷ ತುಂಬುತ್ತಿರುವ ಪ್ರಯುಕ್ತ ಜಿಲ್ಲೆಯ ಪ್ರತಿ ಗ್ರಾಮಪಂಚಾಯತಿ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸೇರಿಸಿ ಗೃಹಲಕ್ಷ್ಮೀ ಯೋಜನೆ ಸಂಭ್ರಮಾಚರಣೆ ನಡೆಸುವ ಬಗ್ಗೆ ಸಿದ್ದತೆ ನಡೆದಿದೆ. ಜು.19 ಭಾನುವಾರವಾಗಿರುವುದರಿಂದ ಮಾರನೆ ದಿನ ಜು.20 ರ ಸೋಮವಾರದಂದು ವಿಶೇಷ ಕಾರ್ಯಕ್ರಮಗಳ ಮೂಲಕ ಯೋಜನೆಯ ಸಂಭ್ರಮಾಚರಣೆ ನಡೆಸಲಾಗುವುದು. ಸಸಿ ನೆಡುವುದು ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಸಮಿತಿ ತಿಳಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆಯಡಿ ಮೃತರ ಖಾತೆಗೆ ಹಣ ಜಮೆಯಾಗುತ್ತಿರುವುದನ್ನು ತಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಪ್ರಸ್ತುತ ಸುಮಾರು 2 ಕೋಟಿ ರೂ. ಅನರ್ಹ ಖಾತೆಗೆ ಜಮೆಯಾಗಿರುವುದು ಪತ್ತೆಯಾಗಿದೆ, ಈಗಾಗಲೇ 23 ಲಕ್ಷ ರೂ.ಹಣ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ. ಇನ್ನೊಂದು ತಿಂಗಳ ಅವಧಿಯೊಳಗೆ ಅನರ್ಹ ಖಾತೆಗಳನ್ನು ಪತ್ತೆ ಮಾಡಿ ಬಂದ್ ಮಾಡುವ ಕೆಲಸ ಮಾಡಲಾಗುವುದು.
ರಾಜಣ್ಣ, ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net