ಕಳೆದ ಮೂರುವರೆ ವರ್ಷಗಳಿಂದ ಚನ್ನರಾಯಪಟ್ಟಣ ಭಾಗದಲ್ಲಿ ಕೃಷಿಭೂಮಿ ಉಳಿವಿಗಾಗಿ ಹೋರಾಟ ಆರಂಭಿಸಿದ್ದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು ಹಾಗೂ ಸರ್ಕಾರದ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿತ್ತು. ದೇವನಹಳ್ಳಿ ಬಂದ್, ಧರಣಿ, ಚುನಾವಣೆ ಬಹಿಷ್ಕಾರದಂತ ಕ್ರಮಗಳ ಮೂಲಕ ಹೋರಾಟಗಾರರು ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಲೇ ಬಂದಿದ್ದರು. ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಕಾನೂನು ಸಚಿವ, ಕೈಗಾರಿಕಾ ಸಚಿವರ ನಡುವೆ ಸಾಕಷ್ಟು ಬಾರಿ ಸಭೆಗಳು ನಡೆದಿದ್ದವು. ಅಂತಿಮವಾಗಿ ಜು.15ರಂದು ರೈತರೊಂದಿಗೆ ನಡೆದ ಸಭೆಯಲ್ಲಿ ಅಂತಿಮ ಅಧಿಸೂಚನೆ ರದ್ದುಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇದಾಗಿ ಸುಮಾರು 4 ತಿಂಗಳು ಕಳೆದರೂ ಅಧಿಕೃತ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ತಣ್ಣಗಾಗಿದ್ದ ಹೋರಾಟ ಮತ್ತೆ ಚುರುಕುಪಡೆದುಕೊಂಡಿತ್ತು. ಸರ್ಕಾರದ ಮೀನಮೇಷ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರೈತರ ಇಚ್ಛೆಯಂತೆ ಕೃಷಿ ಭೂಮಿಯನ್ನಾಗಿ ಮುಂದುವರೆಸಲಾಗುವುದು ಎಂದು ಘೋಷಿಸಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಭೂ ಸ್ವಾಧೀನವನ್ನು ರದ್ದುಪಡಿಸಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದರು. ಅಧಿಕೃತ ಆದೇಶ ಹೊರಡಿಸುವಂತೆ ಪಟ್ಟು ಹಿಡಿದ ರೈತ ಹೋರಾಟಗಾರರು, ವಿವಿಧ ಸಂಘಟನೆಗಳ ಒತ್ತಡಕ್ಕೆ ಕಡೆಗೂ ಸರ್ಕಾರ ಮಣಿದಿದೆ.