ಜಿಲ್ಲೆಯಲ್ಲಿ ಚಿನ್ನಾಭರಣ ಖರೀದಿ ಭರಾಟೆ

 gold jewelry
gold jewelry
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶುಭಸಮಾರಂಭಗಳಿಗೆ ಹೆಚ್ಚು ಪ್ರಶಸ್ತ ಎನಿಸಿರುವ ಅಕ್ಷಯ ತೃತೀಯ ದಿನವಾದ ಏ.20 ಸೋಮವಾರದಂದು ಜಿಲ್ಲೆಯ ಹಲವು ಕಡೆಗಳಲ್ಲಿ ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮಗಳು ಹೆಚ್ಚು ನಡೆದವು. ಮುಖ್ಯವಾಗಿ ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂತು.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮುನ್ನೆಲೆಗೆ ಬಂದಿರುವ ಅಕ್ಷಯ ತೃತೀಯ ಪ್ರಮುಖವಾಗಿ ಚಿನ್ನಾಭರಣ ಖರೀದಿ ವಿಷಯದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಬಡ. ಮಧ್ಯಮ ವರ್ಗದವರ ಪಾಲಿಗೆ ಈ ಶುಭದಿನ ಹೆಚ್ಚು ಆಪ್ತವೆನಿಸಿದ್ದು, ಒಂದೆರೆಡು ಗ್ರಾಂ ಚಿನ್ನವನ್ನಾದರೂ ಖರೀದಿ ಮಾಡಲೇಬೇಕು ಎಂಬ ದಾವಂತ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಪ್ರದೇಶಗಳಲ್ಲಿನ ಚಿನ್ನಾಭರಣದ ಅಂಗಡಿಗಳಲ್ಲಿ ಗ್ರಾಹಕರು ಮುಗಿಬಿದ್ದಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಲೆ ಏರಿಕೆ ನಡುವೆಯೂ ಖರೀದಿ ಜೋರು:
ಕಳೆದ ಡಿಸೆಂಬರ್‌ಗೆ ಹೋಲಿಸಿದರೆ ಚಿನ್ನದ ಬೆಲೆ ಗ್ರಾಂಗೆ 3ರಿಂದ 4 ಸಾವಿರ ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನ ಒಂದೂವರೆ ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಇಷ್ಟೊಂದು ದುಬಾರಿಯಾದರೂ ಚಿನ್ನಾಭರಣ ಖರೀದಿಗೆ ಗ್ರಾಹಕರಲ್ಲಿ ಉತ್ಸಾಹ ಕುಗ್ಗಿಲ್ಲ. ಬಹುತೇಕ ಅಂಗಡಿಗಳಲ್ಲಿ ಚಿನ್ನದ ನಾಣ್ಯ (ಗೋಲ್ಡ್‌ಕಾಯಿನ್) ಹೆಚ್ಚು ಖರೀದಿಯಾಗಿದೆ ಎನ್ನಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸೋಮವಾರ ಹಲವು ಮಳಿಗೆಗಳು ರಾತ್ರಿ 11 ಗಂಟೆವರೆಗೆ ವಹಿವಾಟು ನಡೆಸಿದವು. ರಾತ್ರಿಯಾದರೂ ಗ್ರಾಹಕರ ಸಂಖ್ಯೆ ಕರಗಿರಲಿಲ್ಲ.
ಲಕ್ಷ್ಮೀ ಪೂಜೆಗೆ ಪ್ರಾಶಸ್ತ್ಯ:
ಅಕ್ಷಯ ತೃತೀಯ ದಿನದಂದು ಹೊಸದಾಗಿ ಖರೀದಿಸಿದ ಬಂಗಾರದ ಒಡವೆಯನ್ನು ಲಕ್ಷ್ಮಿ ದೇವಿ ಮುಂದೆ ಇಟ್ಟು ಪೂಜೆ ಸಲ್ಲಿಸಿದರೆ ಅಂಥ ಮನೆಗಳಲ್ಲಿ ಬಂಗಾರ ಮತ್ತಷ್ಟು ವೃದ್ಧಿಯಾಗುತ್ತದೆ ಎಂಬುದು ಜನರ ನಂಬಕೆಯಾಗಿದೆ. ಲಕ್ಷ್ಮೀದೇವಿ ಕೃಪೆಯಿಂದ ಸಿರಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏನಾದರೂ ಸರಿ ಸಣ್ಣ ಮಟ್ಟದಲ್ಲಾದರೂ ಚಿನ್ನ ಖರೀದಿಸಬೇಕೆಂಬ ಆಸೆ ಸಾಮಾನ್ಯವಾಗಿದೆ. ಅದರಲ್ಲೂ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಅಕ್ಷಯ ತೃತೀಯ ಅಚ್ಚುಮೆಚ್ಚಿನ ದಿನ ಎನಿಸಿದೆ. ಪ್ರತಿ ವರ್ಷ ವೈಶ್ಯಕ ಮಾಸದಲ್ಲಿ ಮಹಿಳೆಯರಿಗೆ ಅಚ್ಚುಮೆಚ್ಚಿನ ಚಿನ್ನವನ್ನು ತನ್ನದಾಗಿಸಿಕೊಳ್ಳುವ ಸಡಗರ ಸಂಭ್ರಮದ ಹಬ್ಬವಾಗಿ ಆಚರಣೆಗೆ ಬಂದಿದೆೆ.
ಬಟ್ಟೆ ಅಂಗಡಿ, ಗೃಹಬಳಕೆ ಮಳಿಗೆಗಳೂ ರಶ್:
ಇನ್ನು ಚಿನ್ನಾಭರಣ ಖರೀದಿ ಒಂದೆಡೆಯಾದರೆ ಮನೆಗೆ ಹೊಸ ವಸ್ತು ಖರೀದಿ ಮಾಡುವುದು ಮತ್ತೊಂದು ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆಗಳಲ್ಲೂ ಗ್ರಾಹಕರು ಶುಕ್ರವಾರ ತುಂಬಿ ತುಳುಕುತ್ತಿದ್ದರು. ಇನ್ನು ಹೊಸ ಬಟ್ಟೆ ಖರೀದಿ ಹಬ್ಬ ಆಚರಿಸುವ ಸಂಪ್ರದಾಯ ಅರಂಭವಾಗಿದ್ದು, ಮಹಿಳೆಯರು ಹಾಗೂ ಮಕ್ಕಳ ಬಟ್ಟೆ ಅಂಗಡಿಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಂಗಾರ ಇದ್ದರೆ ಭದ್ರ:
ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಬಹುತೇಕ ಬಡ, ಮಧ್ಯಮ ವರ್ಗದ ಜನ ಚಿನ್ನಾಭರಣ ಖರೀದಿಗೆ ಹೆಚ್ಚು ಉತ್ಸುಕತೆ ತೋರಿಸುತ್ತಾರೆ. ಮನೆಯಲ್ಲಿ ಬಂಗಾರ ಇದ್ದರೆ ಭದ್ರತಾ ಭಾವನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಿಂದಿನಿಂದಲೂ ಜನ ಚಿನ್ನಾಭರಣ ಖರೀದಿ ಮಾಡುವತ್ತ ಆಸಕ್ತಿ ತೋರಿಸುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದು ನಮ್ಮ ಶಕ್ತಿಗೆ ಅನುಸಾರ ಚಿನ್ನಾಭರಣ ಖರೀದಿ ಮಾಡುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದೇವೆ. ಇದಕ್ಕಾಗಿ ಹಣ ಕೂಡಿಡುತ್ತೇವೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿ ಲಕ್ಷ್ಮಿದೇವಿ ಮುಂದಿಟ್ಟು ಪೂಜೆ ಸಲ್ಲಿಸಬೇಕು ಎಂಬುದು ನಮ್ಮ ಕುಟುಂಬದ ಸದಸ್ಯರ ಅಭಿಲಾಷೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಾಗುತ್ತಿರುವುದರಿಂದ ಕಡೇ ಪಕ್ಷ ಒಂದೆರಡು ಗ್ರಾಂ ಆದರೂ ಖರೀದಿಸದೆ ಬಿಡುವುದಿಲ್ಲ.
ಸುನೀತಾ, ಗೃಹಿಣಿ ಬಾಶೆಟ್ಟಿಹಳ್ಳಿ
ಇತ್ತೀಚಿನ ವರ್ಷಗಳಲ್ಲಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿ ಟ್ರೆಂಡ್ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಿನ ದಿನ ಹೆಚ್ಚು ಗ್ರಾಹಕರು ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕಡೆಯಿಂದಲೂ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತೇವೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ವಿನ್ಯಾಸದ ಚಿನ್ನಾಭರಣ ಜತೆಗೆ ಗೋಲ್ಡ್ ಕಾಯಿನ್‌ಗಳ ಮಾರಾಟ ಮಾಡಲಾಗುತ್ತಿದೆ.
ಸುರೇಶ್ ಜೈನ್ ಜ್ಯುವೆಲರಿ ಅಂಗಡಿ ಮಾಲೀಕ ಹೊಸಕೋಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net