ಸಕಾಲದಲ್ಲಿ ಸಿಗುತ್ತಿಲ್ಲ ಅಡುಗೆ ಸಿಲಿಂಡರ್

gas problem
gas problem
Published on
ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದೊಡ್ಡ ಹೋಬಳಿ ಕೇಂದ್ರವಾಗಿರುವ ತೂಬಗೆರೆ ಹೋಬಳಿ ಜನರಿಗೆ ಅಡುಗೆ ಸಿಲಿಂಡರ್ ಪಡೆಯುವುದೇ ದೊಡ್ಡ ಸಾಹಸ ಎನ್ನುವಂತಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರ, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಗೆ ಒಳಪಡುವ ಈ ತೂಬಗೆರೆಯಲ್ಲಿ ಜನರು ಹಲವು ವಿಷಯಗಳಲ್ಲಿ ಅತಂತ್ರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಲ್ಲಿ ಅಡುಗೆ ಸಿಲಿಂಡರ್ ಸಮಸ್ಯೆಯೂ ಸೇರಿದೆ.
ಈ ಹಿಂದಿನಿಂದಲೂ ಈ ಭಾಗದ ಜನರು ಸಿಲಿಂಡರ್ ಪಡೆಯಲು ಪರದಾಡುವುದು ಸಾಮಾನ್ಯವಾಗಿದ್ದರೂ, ಕೆಲವು ತಿಂಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮಧ್ಯಪ್ಯಾಚ್ಯ ಯುದ್ಧದ ನೆಪಹೇಳಿ ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡದೆ ಸತಾಯಿಸುತ್ತಿದ್ದಾರೆ.
15 ಕಿ.ಮೀ ಹೋಗಬೇಕು:
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಎಲ್‌ಪಿಜಿ ಮಾರಾಟ ಕೇಂದ್ರ ಇಲ್ಲದಿರುವುದು ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ. ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪಡೆದುಕೊಳ್ಳಲು 15 ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರಕ್ಕ ತೆರಳಬೇಕಾಗಿ ಪರಿಸ್ಥಿತಿ ಇದೆ. ಇದರ ಜತೆಗೆಗ್ರಾಮೀಣ ಭಾಗದಲ್ಲಿ ಡಬಲ್ ಸಿಲಿಂಡರ್ ಬದಲಾಗಿ ಸಿಂಗಲ್ ಸಿಲಿಂಡರ್ ಸಂಪರ್ಕ ಹೆಚ್ಚಾಗಿ ಪಡೆಯಲಾಗಿದೆ. ಒಮ್ಮೆ ಸಿಲಿಂಡರ್ ಖಾಲಿಯಾದರೆ ಮತ್ತೊಂದು ಪಡೆಯಲು ತಿಂಗಳುಗಟ್ಟೆಲೆ ಕಾಯಬೇಕಾಗಿದೆ.
ಮನೆ ಬಾಗಿಲಿಗೆ ಬರುತ್ತಿಲ್ಲ:
ಮೊದಲೆಲ್ಲ ಬುಕಿಂಗ್ ಮಾಡಿದ ಕೆಲವು ದಿನಗಳಲ್ಲಿ ಮನೆಯ ಬಾಗಿಲಿಗೆ ಬರುತ್ತಿದ್ದ ಸಿಲಿಂಡರ್‌ಗಳು ಈಗ ಬರುತ್ತಿಲ್ಲ. ಅಗತ್ಯವಿದ್ದವರು ಸಿಲಿಂಡರ್‌ಗಳನ್ನು ಪಡೆದುಕೊಳ್ಳಲು ಏಜೆನ್ಸಿ ಹಾಗೂ ಮಾರಾಟ ಕೇಂದ್ರಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಸೌದೆ ಒಲೆ ಅವಲಂಬನೆ:
ಈಚೆಗೆ ಸಿಲಿಂಡರ್ ಪೂರೈಕೆ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ.
ಕಾಳಸಂತೆ ಮಾರಾಟ:
ಇನ್ನು ಸಿಲೆಂಡರ್ ಹೊತ್ತು ತರುವ ಸಿಬ್ಬಂದಿ ಗ್ರಾಹಕರ ಬಳಿ ಮೊಬೈಲ್‌ಗಳನ್ನು ತೆಗೆದುಕೊಂಡು ಅದರಲ್ಲಿ ಬುಕ್ ಮಾಡಿಕೊಂಡು ಬರುವ ಸಿಲಿಂಡರನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದು ಸೋತೆನಹಳ್ಳಿ ಗ್ರಾಮಸ್ಥರ ಅರೋಪವಾಗಿದೆ. ಗ್ರಾಹಕರು ಸಿಲಿಂಡರ್‌ಗೆ ನೋಂದಡಿ ಮಾಡಿದ ಕಂಪನಿಯಿಂದ ಮಾಹಿತಿ ಮತ್ತು ಒಟಿಪಿ ಬರಬೇಕು, ಕೆವೈಸಿ ಮಾಡಿಸಿಕೊಂಡಿರಬೇಕು ಸೇರಿ ಹಲವು ನಿಯಮಗಳ ಕಟ್ಟುನಿಟ್ಟಿನ ಪಾಲನೆಯ ಪರಿಣಾಮ ಗ್ರಾಹಕರಿಗೆ ಸಕಾಲದಲ್ಲಿ ಸಿಲಿಂಡರ್‌ಗಳು ಸಿಗುತ್ತಿಲ್ಲ. ಎಲ್‌ಪಿಜಿ ಕೇಂದ್ರಗಳಿಗೆ ಅಲೆದಾಡುತ್ತಿರುವ ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ಮನೆಗಳಿಗೆ ಹಿಂದಿರುಗುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net