ನೈರ್ಮಲ್ಯದಿಂದ ದೂರ ಗಾಂಧಿಗ್ರಾಮ

* ಹೆನ್ನಾಗರ ಗ್ರಾಮ ಪಂಚಾಯಿತಿ ಅಧಿಕಾರಿಗಳ ರ್ನಿಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ * ಪ್ರಶಸ್ತಿ ಪಡೆದರೆ ಸಾಲದು ಸೌಕರ್ಯ ಕಲ್ಪಿಸಿ
ನೈರ್ಮಲ್ಯದಿಂದ ದೂರ ಗಾಂಧಿಗ್ರಾಮ
Published on: 

ನವೀನ್​ ಶೆಟ್ಟಿ ಕೆರಾಡಿ, ಆನೇಕಲ್​

ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದು ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇರುವ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೀಗ ಸ್ವಚ್ಛತೆ ಮತ್ತು ಮೂಲಸೌಕರ್ಯ ನಿರ್ವಹಣೆ ರ್ನಿಲಕ್ಷ$್ಯ ಎದ್ದು ಕಾಣುತ್ತಿದೆ. ಗ್ರಾಪಂ ಕಚೇರಿ ಪಕ್ಕದಲ್ಲಿಯೇ ಒಳಚರಂಡಿ ವ್ಯವಸ್ಥೆ ಕುಸಿದು, ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಅಧಿಕಾರಿಗಳು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲಾ ಬಸ್​ಗಳ ಸಂಚಾರಕ್ಕೂ ಕಂಟಕ: ನಿತ್ಯ ನೂರಾರು ವಾಹನಗಳು, ಶಾಲಾ ಬಸ್​ಗಳೂ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಒಳಚರಂಡಿ ಕುಸಿದಿರುವ ಅಕ್ಕಪಕ್ಕದಲ್ಲೇ ಮನೆಗಳಿದ್ದು, ಜನವಸತಿ ಪ್ರದೇಶದ ಮಧ್ಯೆ ಇಂತಹ ಅಪಾಯಕಾರಿ ಸ್ಥಿತಿ ನಿಮಾರ್ಣವಾಗಿದೆ. ಅದರಲ್ಲೂ ಭಾರಿ ಗಾತ್ರದ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವಾಗ ಕುಸಿದಿರುವ ಒಳಚರಂಡಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವುದರ ಜತೆಗೆ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.

ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್​ಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನಿಂದ ದುರ್ನಾತ ಹರಡುತ್ತಿದ್ದು, ಸೊಳ್ಳೆಗಳ ಕಾಟ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಸ್ಥಳಿಯರನ್ನು ಕಾಡುತ್ತಿದೆ. ಮನೆಗಳ ಮುಂಭಾಗದಲ್ಲೇ ಕೊಳಚೆ ನೀರು ಹರಿಯುತ್ತಿರುವುದರಿಂದ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಅವ್ಯವಸ್ಥೆ? : ವಿಪರ್ಯಾಸವೆಂದರೆ, ಸಾರ್ವಜನಿಕರ ಸಮಸ್ಯೆ ಪರಿಹರಿಸಬೇಕಾದ ಅಧಿಕಾರಿಗಳೇ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಕುಸಿದ ಒಳಚರಂಡಿ ಹಾಗೂ ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿತ್ಯದ ಓಡಾಟದ ನಡುವೆಯೇ ಇಂತಹ ಅವ್ಯವಸ್ಥೆ ಮುಂದುವರಿದಿರುವುದು ಆಡಳಿತ ವ್ಯವಸ್ಥೆಯ ರ್ನಿಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಪುರಸ್ಕಾರವಿದೆ, ಸ್ವಚ್ಛತೆ ಎಲ್ಲಿದೆ?: ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಹೆನ್ನಾಗರ ಗ್ರಾಪಂ ಸ್ವಚ್ಛತೆ, ನೈರ್ಮಲ್ಯ ಹಾಗೂ ಮೂಲಸೌಕರ್ಯ ನಿರ್ವಹಣೆಯಲ್ಲಿ ಮಾದರಿಯಾಗಿರಬೇಕಿತ್ತು. ಆದರೆ ಕಚೇರಿಯ ಪಕ್ಕದಲ್ಲೇ ಒಳಚರಂಡಿ ಕುಸಿದು ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಪ್ರಶಸ್ತಿಯ ಗೌರವಕ್ಕೆ ಧಕ್ಕೆ ತರುವಂತಿದೆ. ಕೇವಲ ಪ್ರಶಸ್ತಿ ಪಡೆಯುವುದಷ್ಟೇ ಅಲ್ಲದೆ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ಪಂಚಾಯಿತಿ ಮೇಲಿದೆ.

ಸುರಕ್ಷತೆಗೆ ಆದ್ಯತೆ ನೀಡಿ : ಅನಾಹುತ ಸಂಭವಿಸುವ ಮುನ್ನ ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕುಸಿದಿರುವ ಒಳಚರಂಡಿಯನ್ನು ತಕ್ಷಣ ದುರಸ್ತಿಗೊಳಿಸಬೇಕು. ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರನ್ನು ತಡೆದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಮಕ್ಕಳು, ವಾಹನ ಸವಾರರು ಹಾಗೂ ಸ್ಥಳಿಯ ನಿವಾಸಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.