ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುವಂತಿಲ್ಲ. ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ನಿಂದನೆ, ಮಾನಸಿಕ ಹಿಂಸೆ ಇವೆಲ್ಲವೂ ಅಪರಾಧಗಳೇ ಎಂದು ಸೋಮಶೇಖರ್ ತಿಳಿಸಿದರು. ಶಾಲಾ ಕಾಲೇಜು ಶಿಕ್ಷಕರು, ಆಡಳಿತ ಮಂಡಳಿ ಅಥವಾ ಇತರೆ ಸಿಬ್ಬಂದಿ ಮಕ್ಕಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುವುದು ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿನ ಚಲನವಲನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು. ಕಾಲಕಾಲಕ್ಕೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಪಾಲಕರೂ ಮಕ್ಕಳ ಮೇಲೆ ಸದಾ ನಿಗಾ ಇಡಬೇಕು ಇದರಿಂದ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದರು.