ಜುಲೈ ಅಂತ್ಯವಾಗಿ ಆಗಸ್ಟ್ ಕಾಲಿಟ್ಟಿದ್ದರೂ ಜಿಲ್ಲೆಯಲ್ಲಿ ಮಳೆರಾಯನ ಸುಳಿವಿಲ್ಲ, ಪ್ರಸ್ತುತ ಪಶುಪಾಲನಾ ಇಲಾಖೆ ಸರ್ವೇಯಂತೆ ಜಿಲ್ಲೆಯಲ್ಲಿ ಸುಮಾರು 41 ವಾರಕ್ಕಾಗುವಷ್ಟು ಮೇವು ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಕಳೆದ ವರ್ಷ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಇದರಿಂದ ಒಣಹುಲ್ಲಿನ ಕೊರತೆ ಎದುರಾಗುವುದಿಲ್ಲ ಎಂಬ ಭರವಸೆ ವ್ಯಕ್ತವಾಗಿದೆ. ಆದರೂ ಆಗಸ್ಟ್‌ನಲ್ಲಿ ವಾಡಿಕೆ ಮಳೆಯೂ ಆಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರಲಿದೆ. ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ದತೆ ನಡೆಸಿರುವ ರೈತರು ಮಳೆರಾಯನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆಯಾದರೂ ಮೇವಿನ ಕೊರತೆ ಎದುರಾಗುವುದಿಲ್ಲ. ಇಲ್ಲವಾದರೆ ಮೇವಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಲಾಖೆ ನೆರವಿನೊಂದಿಗೆ ಮೇವು ಬೆಳೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.