ಜಿಲ್ಲಾ ಮತ್ಸಕೃಷಿಗೆ ತಿಲಾಪಿಯಾ ಮೀನು ಸೇರ್ಪಡೆ

Fish farming
Fish farming
Published on
ಶಿವರಾಜ. ಎಂ ಬೆಂಗಳೂರು ಗ್ರಾಮಾಂತರ
ವೇಗವಾಗಿ ಬೆಳೆಯುವ ಜಲಚರಗಳಲ್ಲಿ ಇತ್ತೀಚಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಿರುವ ತಿಲಾಪಿಯಾ ಅಥವಾ ಗ್‌ಟಿ ತಿಲಾಪಿಯ ತಳಿಯ ಮೀನುಗಳಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಕುದುರಿದ್ದು ಜಿಲ್ಲಾ ಮೀನುಗಾರಿಕೆ ಇಲಾಖೆ ಮತ್ಸಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಜಾತಿಯ ಮೀನುಮರಿಗಳನ್ನು ರೈತರಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗ್‌ಟಿ ತಿಲಾಪಿಯಾ ಇವುಗಳನ್ನು ಮುಖ್ಯವಾಗಿ ಕೆರೆ ಮತ್ತು ಜಲಾಶಯಗಳಲ್ಲಿ ಸಾಕಾಣಿಕೆ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿನ ಕೃಷಿ ಹೊಂಡಗಳು ಅಥವಾ ಮೀನುಗಾರಿಕೆಗಾಗಿಯೇ ನಿರ್ಮಿಸಿರುವ ಕೊಳ ಅಥವಾ ಹೊಂಡಗಳಲ್ಲಿ ಈ ಜಾತಿಯ ಮೀನುಮರಿಗಳು ಉತ್ತಮವಾಗಿ ಬೆಳೆಯುವುದರಿಂದ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಾಥಮಿಕ ಪ್ರಯೋಗವಾಗಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ತಲಾ 40 ರೈತರಿಗೆ ಈ ಮೀನುಗಳನ್ನು ವಿತರಣೆ ಮಾಡುತ್ತಿದೆ.
ಉತ್ತಮ ಪ್ರೋಟಿನ್:
ಇವುಗಳ ಮರಿಗಳನ್ನು ಪಶ್ಚಿಮ ಬಂಗಾಳದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಇವು ಹೆಚ್ಚಿನ ಆಹಾರ ಪರಿವರ್ತನಾ ದರವನ್ನು ಹೊಂದಿದ್ದು, ವೇಗವಾಗಿ ಬೆಳೆಯುತ್ತವೆ. ತಿಲಾಪಿಯಾ ಮರಿಗಳನ್ನು ಸಾಕಣೆ ಮಾಡುವಾಗ ನೀರಿನ ಗುಣಮಟ್ಟ ಮತ್ತು ಪೋಷಕಾಂಶಯುಕ್ತ ಆಹಾರವನ್ನು ಒದಗಿಸುವುದು ಅವುಗಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೆ ಇತರ ಮೀನುಜಾತಿಗಳಿಗೆ ಹೋಲಿಸಿದರೆ ತಿಲಾಪಿಯಾ ಉತ್ತಮ ಪ್ರೋಟಿನ್ ಅಂಶವನ್ನು ಹೊಂದಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖರ್ಚು ಕಡಿಮೆ ಲಾಭ ಹೆಚ್ಚು:
ಈ ಹಿಂದೆ ಸಾಮಾನ್ಯವಾಗಿ ಗೆಂಡೆ ಮೀನು ಅಥವಾ ಸಾಮಾನ್ಯ ಜಾತಿಯ ಮೀನು ಮರಿಗಳನ್ನು ಇಲಾಖೆ ಮೀನುಗಾರರಿಗೆ ನೀಡುತ್ತಿತ್ತು. ಇವುಗಳ ಬೆಳವಣಿಗೆ ಕಾಲ ನಿಧಾನವಾಗಿತ್ತು ಅಲ್ಲದೆ ಹೆಚ್ಚು ಬೇಡಿಕೆ ಇರಲಿಲ್ಲ. ಆದರೆ ತಿಲಾಪಿಯಾ ಸಂತತಿ ಮೀನುಗಳು ವೇಗವಾಗಿ ಬೆಳೆಯುತ್ತವೆ ಸುಮಾರು ಕಾಲು ಕೆಜಿ ತೂಕದ ಮೀನುಗಳನ್ನು ಖಾದ್ಯಕ್ಕೆ ಬಳಸಬಹುದು ಮುಖ್ಯವಾಗಿ ಫಿಶ್‌ಪ್ರೈ ಖಾದ್ಯಕ್ಕೆ ಹೇಳಿ ಮಾಡಿಸಿದ ಮೀನಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಅಲ್ಲದೆ ಇವುಗಳ ಸಾಕಣೆ ವೆಚ್ಚ ಕಡಿಮೆ ಇದ್ದು ಲಾಭ ಹೆಚ್ಚಿದೆ ಎಂಬುದು ಇದರ ಹೆಗ್ಗಳಿಕೆಯಾಗಿದೆ. 1 ಮೀನು ಮರಿಗೆ 2.50 ರೂಪಾಯಿ ಖರ್ಚು ಬರಲಿದೆ. ಮರಿಗಳು ಉತ್ತಮ ತೂಕದ ಮೀನುಗಳಾಗುವುದರಿಂದ ಹಾಕಿದ ಬಂಡವಾಳಕ್ಕಿಂತ ಅಧಿಕ ಲಾಭ ಬರಲಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.
ಕೊಳ ಮೀನುಗಾರಿಕೆಗೆ ಸಬ್ಸಿಡಿ ಸವಲತ್ತು:
ಕೃಷಿ ಹೊಂಡಗಳಲ್ಲಿ ಅಥವಾ ರೈತರು ಜಮೀನುಗಳಲ್ಲಿ ಮೀನುಸಾಕಣೆ ಮಾಡಲು ಇಲಾಖೆಯಿಂದ ಪ್ರೋತ್ಸಾಹ ಧನವೂ ಸಿಗಲಿದೆ. 1 ಎಕರೆ ಪ್ರದೇಶದಲ್ಲಿ ಮೀನುಗಾರಿಗೆ ಬಂಡವಾಳ ಹೂಡಿದರೆ ಎಸ್‌ಸಿಎಸ್‌ಟಿ ಹಾಗೂ ಎಲ್ಲ ವರ್ಗದ ಮಹಿಳೆಯರಿಗೆ ಶೇ.60 ಸಬ್ಸಿಡಿ ದೊರೆಯಲಿದೆ ಹಾಗೆ ಇನ್ನಿತರ ವರ್ಗದವರಿಗೆ ಶೇ.40 ಸಬ್ಸಿಡಿ ದೊರೆಯಲಿದೆ.
ಸವಾಲುಗಳೇನು?
ಮೀನುಗಾರಿಗೆ ಅಭಿವೃದ್ಧಿಗೆ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದರೂ ಮೀನುಗಾರರು ಹಲವು ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿನ ಹವಾಗುಣ, ನೀರಿನ ಕೊರತೆ ಮೀನುಗಾರಿಕೆಗೆ ಸಾಕಷ್ಟು ತೊಡಕಾಗಿದೆ. ಹೊಂಡಗಳಲ್ಲಿ ವರ್ಷಪೂರ್ತಿ ನೀರು ಸಂಗ್ರಹಣೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಯಾವುದೇ ನದಿಮೂಲವಿಲ್ಲದ ಜಿಲ್ಲೆಯಲ್ಲಿ ದೊಡ್ಡಮಟ್ಟದ ಮೀನುಗಾರಿಗೆ ಕಷ್ಟಸಾಧ್ಯವಾಗಿದೆ. ವಿದ್ಯುತ್ ಅಡಚಣೆ, ಬತ್ತಿಹೋಗುವ ಕೊಳವೆಬಾವಿಗಳು, ಬೇಸಿಗೆಯಲ್ಲಿ ವಿಪರೀತ ಬಿಸಿಲು ಮತ್ತಿತರ ಕಾರಣಗಳು ಮೀನುಗಾರಿಗೆ ಸವಾಲಾಗಿ ಪರಿಣಮಿಸಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮೀನು ಸಾಕಣೆಗೆ ಪೀಡ್‌ಗೆ ಪ್ರಸ್ತಾಪ:
ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇಲಾಖೆ ಮೀನು ಸಾಕಣೆಗೆ ಅಗತ್ಯವಿರು ಪೀಡ್‌ಗಳನ್ನು ಮೀನುಗಾರರಿಗೆ ವಿತರಿಸು ಬಗ್ಗೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಹೊಂಡಕ್ಕೆ ತಲಾ 2 ಕೆಜಿಗಳಂತೆ ಅಗತ್ಯವಿರುವಷ್ಟ ಪೀಡ್‌ಗಳನ್ನು ವಿತರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಮತ್ಸಕೃಷಿ ಪ್ರೋತ್ಸಾಹಕ್ಕೆ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಇದರಲ್ಲಿ ಕೃಷಿಹೊಂಡ ಅಥವಾ ಕೊಳ, ಪ್ರತ್ಯೇಕ ಹೊಂಡಗಳಲ್ಲಿ ಮೀನುಗಾರಿಕೆ ಮಾಡುವವರಿಗೆ ತಿಲಾಪಿಯಾ ಜಾತಿಯ ಮೀನುಮರಿಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಜಾತಿಯ ಮೀನಿನ ಮರಿಗಳು ವೇಗವಾಗಿ ಬೆಳೆಯುತ್ತವೆ, ಉತ್ತಮ ಪ್ರೋಟಿನ್‌ಯುಕ್ತ ಆಹಾರವಾಗಿದ್ದು ಹೆಚ್ಚು ಬೇಡಿಕೆ ಇದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಜಿಲ್ಲಾ ಮೀನುಗಾರಿಕೆ ಇಲಾಖೆ ಸಂಪರ್ಕಿಸಬಹುದು.
ಎನ್.ಸುಬ್ರಹ್ಮಣ್ಯ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ ಜಿಲ್ಲೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net