ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ವೈದ್ಯನ ವಿರುದ್ಧ ಎಫ್​ಐಆರ್​

  21 ನೆಲಪಿಎಚ್​ 02  ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಕೆರೆಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ  ವೈದ್ಯ ವೈದ್ಯ ಅರುಣ್​ ಗಿರೀಶ್​ ಸಾಗರ್​ನನ್ನು ಪೊಲೀಸರು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.
21 ನೆಲಪಿಎಚ್​ 02 ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಕೆರೆಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೈದ್ಯ ವೈದ್ಯ ಅರುಣ್​ ಗಿರೀಶ್​ ಸಾಗರ್​ನನ್ನು ಪೊಲೀಸರು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದ ವೈದ್ಯನ ವಿರುದ್ಧ ಎಫ್​ಐಆರ್​
ನೆಲಮಂಗಲ: ಯಂಟಗಾನಹಳ್ಳಿ-ಭಟ್ಟರಹಳ್ಳಿ ಕೆರೆಗೆ ರಾಶಿರಾಶಿ ವೈದ್ಯಕೀಯ ತ್ಯಾಜ್ಯ ಸುರಿದ ತಾಲೂಕಿನ (ಈ ಹಿಂದೆ ಮಾಗಡಿ ತಾಲೂಕು) ಗುಡೇಮಾರನಹಳ್ಳಿಖಾಸಗಿ ಕ್ಲಿನಿಕ್​ನ ವೈದ್ಯ ಅರುಣ್​ ಗಿರೀಶ್​ ಸಾಗರ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಜೂ. 20 ರಂದು ತಾಲೂಕಿನ ಗೋರಿನಬೆಲೆ ಗ್ರಾಮದ ಖಾಸಗಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಸಚಿವ ಈಶ್ವರ್​ ಖಂಡ್ರೆ, ಯಂಟಗಾನಹಳ್ಳಿ ಗ್ರಾಮಪಂಚಾಯಿತಿಗೆ ಭೇಟಿ ನೀಡಿದ್ದರು. ಆಗ ಕೆರೆಯಲ್ಲಿ ವೈದ್ಯಕಿಯ ತ್ಯಾಜ್ಯ ಸುರಿದಿರುವುದು ಮತ್ತು ವೈದ್ಯಕಿಯ ತ್ಯಾಜ್ಯದಿಂದಾಗಿ ಆಗಬಹುದಾದ ಪರಿಣಾಮಗಳ ಕುರಿತಾಗಿ ಸಾರ್ವಜನಿಕರು ಸಚಿವರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಅಧಿಕಾರಿಗಳು ವೈದ್ಯರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಸ್ಥಳ ಪರಿಶೀಲನೆ: ಸಚಿವರ ಸೂಚನೆ ಮೇರೆಗೆ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಇಒ ಸ್ಥಳ ಪರಿಶೀಲನೆ ನಡೆಸಿದ್ದು ಚಿಕಿತ್ಸೆ ವೇಳೆ ಬಳಸಿದ್ದ ಸಹಸ್ರಾರು ಸಂಖ್ಯೆಯ ಸಿರಿಂಜ್​, ರಕ್ತಸಿಕ್ತವಾಗಿದ್ದ ಬ್ಯಾಂಡೇಜ್​ಗಳನ್ನು ಪ್ಲಾಸ್ಟಿಕ್​ ಚೀಲಗಳಲ್ಲಿ ತುಂಬಿ ಕೆರೆಗೆ ಎಸೆದಿರುವುದು ಬೆಳಕಿಗೆ ಬಂದಿತ್ತು. ತ್ಯಾಜ್ಯ ಸುರಿದಿರುವ ಕ್ಲಿನಿಕ್​, ಪ್ರಯೋಗಾಲಯ ಸೇರಿ ವೈದ್ಯರ ಪತ್ತೆಗೆ ಮುಂದಾಗಿದ್ದರು.
ತಪ್ಪೊಪ್ಪಿಕೊಂಡ ವೈದ್ಯ: ಕೆರೆಯಲ್ಲಿ ಸುರಿದಿರುವ ವೈದ್ಯಕಿಯ ತ್ಯಾಜ್ಯ ತಮ್ಮದೇ ಕ್ಲಿನಿಕ್​ನದ್ದು ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ವೈದ್ಯ ಅರುಣ್​ ಗಿರೀಶ್​ ಸಾಗರ್​ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ಪ್ರಕರಣ ತಣ್ಣಗಾಗಿದೆ.
ಗ್ರಾಮಸ್ಥರಿಂದ ಗಲಾಟೆ, ವೈದ್ಯನ ಡ್ರಾಮ: ಯಂಟಗಾನಹಳ್ಳಿ ಗ್ರಾಮಸ್ಥರು ಶನಿವಾರ ಬೆಳಗ್ಗೆ ಗುಡೇಮಾರನಹಳ್ಳಿ ಕ್ಲಿನಿಕ್​ ಬಳಿ ತೆರಳಿ ಗಲಾಟೆ ಮಾಡಿ ಬಂದಿದ್ದರು. ಅದಾದ ಬಳಿಕ ವೈದ್ಯ ಅರುಣ್​ ಗಿರೀಶ್​ಸಾಗರ್​ ಜೆಸಿಬಿ ಯಂತ್ರದ ಮೂಲಕ ಆಳವಾದ ಗುಂಡಿ ತೆಗೆದು ವೈದ್ಯಕಿಯ ತ್ಯಾಜ್ಯ ಮುಚ್ಚುವ ಹೈಡ್ರಾಮ ಕೂಡ ನಡೆದಿತ್ತು. ಇದೇ ವೇಳೆ ಗ್ರಾಮದ ರಸ್ತೆಯಲ್ಲಿ ಕುಳಿತು ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು, ತಾಲೂಕು ಆರೋಗ್ಯಾಧಿಕಾರಿ ಮತ್ತು ತಾಲೂಕು ಪಂಚಾಯಿತಿ ಇಒ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆಕೈಬಿಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸಭೆ ಇನ್ನಿತರ ಕಾರಣಗಳನ್ನು ಇಟ್ಟಕೊಂಡು ತಾಲೂಕು ಆರೋಗ್ಯಾಧಿಕಾರಿ ಬಾರದ ಕಾರಣ ಸ್ಥಳದಲ್ಲಿ ಪರಿಸ್ಥಿತಿ ಕೈ ಮೀರುವ ಲಕ್ಷಣ ಗೋಚರಿಸಿದವು. ವಿಚಾರ ತಿಳಿದ ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿಯವರು ಪ್ರಭಾರ ಆರೋಗ್ಯಾಧಿಕಾರಿಗಳಿಗೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಆರೋಗ್ಯಾಧಿಕಾರಿ ಡಾ.ಪದ್ಮಿನಿ ಗ್ರಾಮಸ್ಥರ ಮನವೊಲಿಸಿದ್ದಲ್ಲದೇ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿಕೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದನ್ನು ಕೆಲವರಿಂದ ಮಾಹಿತಿ ಪಡೆದ ತಾಲೂಕು ಪಂಚಾಯಿತಿ ಇಒ ಡಾ.ಬಿಂದು ಸ್ಥಳಕ್ಕೆ ಬಾರದಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net