ಜಿಲ್ಲೆಯಲ್ಲಿನ ಕುಕ್ಕುಟೋದ್ಯಮ ಚೇತರಿಕೆ

egg story
egg story
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರಿ ಪೆಟ್ಟು ತಿಂದಿದ್ದ ಜಿಲ್ಲಾ ಕುಕ್ಕುಟೋದ್ಯಮ ಚೇತರಿಕೆ ಕಾಣುತ್ತಿದೆ. ಕಳೆದೊಂದು ವಾರದಿಂದ ಮೊಟ್ಟೆಗಳ ವಹಿವಾಟು ಸುಧಾರಿಸುತ್ತಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗುವ ಲಕ್ಷಣ ಕಂಡುಬರುತ್ತಿದೆ.
ರಾಜ್ಯದಲ್ಲೇ ಹೆಚ್ಚು ಕುಕ್ಕುಟೋದ್ಯಮವಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕೋಳಿ ಸಾಕಣೆ ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿತ್ತು. ಅರಬ್ ದೇಶಗಳು ಸೇರಿ ಹೊರ ರಾಷ್ಟ್ರಗಳಿಗೆ ರಪ್ತಾಗುತ್ತಿದ್ದ ಭಾರಿ ಪ್ರಮಾಣದ ವಹಿವಾಟಿನ ಮೇಲೆ ಯುದ್ಧದ ಕಾರ್ಮೋಡ ಕವಿದ ಹಿನ್ನೆಲೆಯಲ್ಲಿ ರಪ್ತು ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿತ್ತು. ಇದೀಗ ಯುದ್ಧ ಸಂಧಾನದ ಹಾದಿಯಲ್ಲಿರುವುದರಿಂದ ಮೆಲ್ಲನೆ ರಪ್ತು ವಹಿವಾಟು ಚೇತರಿಸಿಕೊಳ್ಳುತ್ತಿದೆ. ಜತೆಗೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಲ್ಲೂ ಸುಧಾರಣೆಯಾಗುತ್ತಿದ್ದು, ಬಾಗಿಲು ಹಾಕಿಕೊಂಡಿದ್ದ ಹೋಟೆಲ್ ಉದ್ಯಮಗಳು ಕಾರ್ಯಚಟುವಟಿಕೆ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ 4 ರಿಂದ 4.30 ರೂಪಾಯಿಗೆ ಕುಸಿದಿದ್ದ ದರದಲ್ಲಿ ಏರಿಕೆ ಕಂಡಿದ್ದು ಪ್ರಸ್ತುತ ಮೊಟ್ಟೆಯೊಂದಕ್ಕೆ 6 ರಿಂದ 6.30 ರೂಪಾಯಿ ದರ ಜಿಗಿತ ಕಂಡಿದೆ.
ಸಗಟು ದರದಲ್ಲೂ ಚೇತರಿಕೆ:
ಕೆಲವು ತಿಂಗಳ ಹಿಂದಷ್ಟೇ 7 ರೂಪಾಯಿಯಿಂದ 7.30 ರವರೆಗೆ ಏರಿಕೆ ಕಂಡಿದ್ದ ಮೊಟ್ಟೆಯೊಂದರ ದರ ಏಕಾಏಕಿ 5 ರೂಪಾಯಿಗೆ ಕುಸಿದಿತ್ತು. ಅದರಲ್ಲೂ ಸಗಟು ದರದಲ್ಲಿ 100 ಮೊಟ್ಟೆ ಖರೀದಿಸಿದರೆ 4.30 ರೂ. ಹಾಗೆಯೇ 500 ಮೊಟ್ಟೆ ಖರೀದಿಸಿದರೆ 4 ರೂಪಾಯಿಗೆ ಬಿಕರಿಯಾಗುತ್ತಿತ್ತು. ಇದೀಗ ಸಗಟು ವ್ಯಾಪಾರದಲ್ಲೂ ಚೇತರಿಕೆ ಕಂಡಿದ್ದು, ಕೋಳಿ ಸಾಕಣೆ ರೈತರ ಮೊಗದಲ್ಲಿ ಕೊಂಚ ನಗು ಮೂಡಿದಂತಾಗಿದೆ.
ಗ್ಯಾಸ್ ಟ್ರಬಲ್‌ನಿಂದ ಹೊರಬಂದ ಜಿಲ್ಲೆ:
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಹೋಟೆಲ್‌ಗಳಲ್ಲಿ ವ್ಯಾಪಾರ ವಹಿವಾಟು ಗಣನೀಯವಾಗಿ ತಗ್ಗಿತ್ತು. ಅದರಲ್ಲೂ ಮಾಂಸಹಾರಿ ಹೋಟೆಲ್‌ಗಳಲ್ಲಿ ಕೆಲವೊಂದು ಆಯ್ದ ತಿಂಡಿಗಳನ್ನು ಹೊರತುಪಡಿಸಿ ನಿತ್ಯದ ಮೆನುಗಳು ಸಿಗುತ್ತಿರಲಿಲ್ಲ. ಇದೀಗ ಮತ್ತೆ ಹೋಟಲ್‌ಗಳಲ್ಲಿ ವಹಿವಾಟು ಹಳಿಗೆ ಮರಳಿದೆ. ಅದರಲ್ಲೂ ಬಹುತೇಕ ಬಂದ್ ಆಗಿದ್ದ ಬೀದಿ ಬದಿ ಹೋಟಲ್‌ಗಳು ಪುನಾರಂಭಗೊಂಡಿರುವುದು ಮೊಟ್ಟೆ ಹಾಗೂ ಕೋಳಿ ಮಾಂಸ ವಹಿವಾಟಿಗೆ ಟಾನಿಕ್ ನೀಡಿದಂತಾಗಿದೆ. ಇದೇ ರೀತಿ ಪ್ರಮುಖವಾಗಿ ಬೇಕರಿ ತಿನಿಸುಗಳಲ್ಲಿ ಬಳಸುವ ಮೊಟ್ಟೆಗಳಿಗೆ ಬೇಡಿಕೆ ಕಂಡುಬರುತ್ತಿದೆ. ಗ್ಯಾಸ್ ಕೊರತೆಯಿಂದಾಗಿ ಬೇಕರಿಗಳಲ್ಲೂ ತಹರೇವಾರಿ ತಿನಿಸುಗಳ ತಯಾರಿಕೆಗೆ ಕಡಿವಾಣ ಹಾಕಲಾಗಿತ್ತು. ಮೊಟ್ಟೆ ಖರೀದಿಗೆ ಮುಂದಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿತ್ತು.
ಮಧ್ಯಪ್ರಾಜ್ಯ ಯುದ್ಧ ಕುಕ್ಕುಟೋಮದ್ಯದ ಮೇಲೆ ನೇರ ದುಷ್ಪರಿಣಾಮ ಬೀರಿತ್ತು. ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಬಹುತೇಕ ಹೋಟಲೆ ಉದ್ಯಮಗಳು ಬಾಗಿಲು ಹಾಕಿಕೊಂಡಿದ್ದರಿಂದಮೊಟ್ಟೆ ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿತ್ತು. ಕಳೆದೊಂದು ವಾರದಿಂದ ತುಸು ಚೇತರಿಕೆ ಕಾಣುತ್ತಿದೆ. ಆದರೆ ಕೋಳಿ ಮಾಂಸ ಮಾರಾಟದಿಂದ ನಷ್ಟವೇ ಆಗುತ್ತಿದೆ. ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಕಂಪನಿಗಳೇ ದರ ನಿರ್ಧರಿಸುವುದರಿಂದ ನಷ್ಟವಾಗುತ್ತಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಪಶುಪಾಲನ ಇಲಾಖೆಯಿಂದ ನ್ಯಾಯಯುತ ದರ ನಿಗಧಿಪಡಿಸಿದರೆ ಕುಕ್ಕುಟೋದ್ಯಮಕ್ಕೆ ಬಹಳ ಸಹಕಾರಿಯಾಗಲಿದೆ.
ನಂಜುಡಪ್ಪ, ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net