ರಾಜ್ಯ ಸರ್ಕಾರ ಇದನ್ನು ರೈತರಿಗೆ ಮನೆ ಬಾಗಿಲಲ್ಲಿ ಪೌತಿ ಖಾತೆಗಳನ್ನು ಒದಗಿಸಲು ’ಇ-ಪೌತಿ’ ತಂತ್ರಾಂಶದ ಮೂಲಕ ಜಾರಿಗೊಳಿಸಲಾಗಿದೆ. ಇದರ ಮುಖ್ಯ ಉದ್ದೇಶ ರೈತರಿಗೆ ಬ್ಯಾಂಕ್ ಸಾಲ, ಬೆಳೆ ವಿಮೆ, ಪರಿಹಾರ, ಹಾಗೂ ಇತರ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಅನುಕೂಲ ಮಾಡಿಕೊಡುವುದಾಗಿದೆ. ಆದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೌಟುಂಬಿಕ ಕಲಹ, ಒಗ್ಗಟ್ಟಿನ ಕೊರತೆ ಮತ್ತಿತರ ಕಾರಣಗಳಿಂದ ಕಂದಾಯ ಇಲಾಖೆಯೊಂದಿಗೆ ಸಾರ್ವಜನಿಕರ ಸಮನ್ವಯ ಕೊರತೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕೈದು ಸದಸ್ಯರಿದ್ದರೆ ಎಲ್ಲರ ಸಹಿ ಹಾಗೂ ಅವರ ಮೊಬೈಲ್ ಸಂಖ್ಯೆ ಬಳಿಕ ಒಟಿಪಿ ನಮೂದಾಗಬೇಕಾಗಿದೆ. ಇದರಲ್ಲಿ ಒಬ್ಬರದು ವ್ಯತ್ಯಾಸವಾದರೂ ಅರ್ಜಿ ಪೂರ್ಣಗೊಳ್ಳುವುದಿಲ್ಲ. ಪರಿಣಾಮವಾಗಿ ಖಾತೆ ಆಂದೋಲನ ಗುರಿ ಮುಟ್ಟುವುದು ಸುಲಭದ ಹಾದಿಯಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.