ಗ್ರಾಮೀಣ ಜನರ ತುರ್ತು ಅರೋಗ್ಯ ಸೇವೆಗೆ ವರದಾನ

E-bike handover
E-bike handover
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಪ್ರದೇಶ ಹಾಗೂ ದೂರದ ಪ್ರದೇಶಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸಂಚಾರ ಇ-ಬೈಕ್‌ಗಳು ಬಹಳಷ್ಟು ಸಹಕಾರಿ ಆಗಲಿವೆ, ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಆರೋಗ್ಯ ರಕ್ಷಣೆ ಸಾಧ್ಯವಾಗಲಿದೆ ಎಂದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ವಾಸಂತಿ ಅಮರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿ, ಜಿಲ್ಲಾ ಆರೋಗ್ಯ ಇಲಾಖೆಯಡಿ ’ಆಪ್ಟಮ್ ಇಂಡಿಯಾ ಸಂಸ್ಥೆ ಮತ್ತು ಬೆಂಗಳೂರು ಯುನೈಟೆಡ್ ವೇ ವತಿಯಿಂದ ಸಿಎಸ್‌ಆರ್ ಅನುದಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 45 ಇ-ಬೈಕ್ ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಈಗಾಗಲೇ ರಾಜ್ಯಾದ್ಯಂತ ’ಆರೋಗ್ಯ ಸೇತು ಸಂಚಾರ ಆರೋಗ್ಯ ಘಟಕ’ ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕೆ ಪೂರಕವಾಗಿ ಇಂದು ’ಆಪ್ಟಮ್ ಇಂಡಿಯಾ ಸಂಸ್ಥೆಯವರು ಗ್ರಾಮಾಂತರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ- ಬೈಕ್‌ಗಳನ್ನು ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಚಾರ ಇ- ಬೈಕ್‌ಗಳು ತುರ್ತು ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸಲಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಇದರ ಪರಿಣಾಮವಾಗಿ ತುರ್ತು ಆರೋಗ್ಯ ಸೇವೆಗಳಲ್ಲಿ ವಿಳಂಬವಾಗುತ್ತದೆ. ಈ ರೀತಿಯ ಸಂದರ್ಭಗಳಲ್ಲಿ ಇ-ವಾಹನಗಳು ಆರೋಗ್ಯ ಸಿಬ್ಬಂದಿಗೆ ಸಹಾಯಕವಾಗಿರುತ್ತವೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ದುರ್ಬಳಕೆಯಾಗಬಾರದು: ಇ-ಬೈಕ್ ವಾಹನಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು, ಇದರ ಬಳಕೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಸರಿಯಾದ ಸಮಯಕ್ಕೆ ಆರೋಗ್ಯ ಸೇವೆ ಒದಗಿಸಬೇಕು ಇದರಲ್ಲಿ ಯಾವುದೇ ದುರ್ಬಳಕೆಗೆ ಅವಕಾಶ ಮಾಡಿಕೊಡಬಾರದು ಎಂದು ಆರೋಗ್ಯ ಸಿಬ್ಬಂದಿಗೆ ಸಿಇಒ ಸಲಹೆ ನೀಡಿದರು.
ಮಹತ್ವದ ಪಾತ್ರ ವಹಿಸುತ್ತದೆ:
ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರಿಗೆ, ರೋಗಿಗಳಿಗೆ ತ್ವರಿತ ಚಿಕಿತ್ಸೆ, ಔಷಧಿಗಳನ್ನು ತಲುಪಿಸಲು ಹಾಗೂ ಮನೆ, ಮನೆಗೂ ಆರೋಗ್ಯ ಸೇವೆಯನ್ನು ಒದಗಿಸಲು ಈ ವಾಹನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.’ಆಪ್ಟಮ್ ಇಂಡಿಯಾ ಸಂಸ್ಥೆಯವರು ಸಿಎಸ್‌ಆರ್ ಅನುದಾನದಡಿ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಇಂಥಹದ್ದೊಂದು ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇ-ಬೈಕ್‌ಗಳು ಪರಿಸರ ಸ್ನೇಹಿ ಯಾಗಿದ್ದು, ವಾಯುಮಾಲಿನ್ಯ ಆಗದಂತೆ ತಡೆಗಟ್ಟತ್ತವೆ ಇದರಿಂದ ಪರಿಸರಕ್ಕೂ ಕೊಡುಗೆ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ಷಮತೆ ಹೆಚ್ಚಿಸಲಿದೆ:
ಇ- ಬೈಕ್‌ಗಳು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲಿವೆ. ತುರ್ತು ಆರೋಗ್ಯ ಸೇವೆ ಒದಗಿಸಲಿವೆ, ಆರೋಗ್ಯ ಸೇವೆ ಮತ್ತು ಸಿಬ್ಬಂದಿ ಕಾರ್ಯ ಕ್ಷಮತೆ ಹೆಚ್ಚಲಿದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಭಾಗದ ಜನರಿಗೆ ಅನುಕೂಲವಾಗಲಿದೆ, ಬಡವರು, ಮಧ್ಯಮ ವರ್ಗದವರು ಹಾಗೂ ಆಸ್ಪತ್ರೆಗೆ ತೆರಳದವರಿಗೆ ಅನುಕೂಲವಾಗಲಿದೆ, ಆರೋಗ್ಯ ಸೇವೆಯನ್ನು ಮತ್ತಷ್ಟು ಜನರ ಹತ್ತಿರ ಕೊಂಡೊಯ್ಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕಾಕೃಷ್ಣರೆಡ್ಡಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net