ದೊಡ್ಡಬಳ್ಳಾಪುರ ತಾಲೂಕು ಸಿದ್ದನಾಯಕನಹಳ್ಳಿ ಬಳಿ 6 ಎಕರೆ ವಿಸ್ತೀರ್ಣದಲ್ಲಿ ಒಂದೂವರೆ ವರ್ಷದ ಹಿಂದೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಅರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹಾಗೂ ಶಾಸಕ ಧೀರಜ್‌ಮುನಿರಾಜು ನೇತೃತ್ವದಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆದರೂ ನಂತರದಲ್ಲಿ ನಾನಾ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದು ಜಿಲ್ಲೆಯ ಜನರ ಬಹುದಿನಗಳ ಆಸೆಗಣ್ಣಿಗೆ ಮಣ್ಣೆರೆರಚಿದಂತಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿ ಸದಸ್ಯರು ಮುಖ್ಯಮಂತ್ರಿಯಾದಿಯಾಗಿ ಸಚಿವರು ಸೇರಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಾ ಬಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ದೇವನಹಳ್ಳಿಗೆ ಆಗಮಿಸಲಿದ್ದ ಉಸ್ತುವಾರಿ ಸಚಿವರ ಮಾಹಿತಿ ಪಡೆದ ಹೋರಾಟ ಸಮಿತಿ ಸದಸ್ಯರು ಮತ್ತೆ ಸಚಿವರಲ್ಲಿ ಜಿಲ್ಲಾಸ್ಪತ್ರೆ ಕಾಮಗಾರಿ ಪುನಾರಂಭದ ಬಗ್ಗೆ ಒತ್ತಾಯಿಸಿದ್ದು, ಸಚಿವರು ಶೀಘ್ರದಲ್ಲೇ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.