ದೇವನಹಳ್ಳಿ ತಾಯಿ-ಮಕ್ಕಳ ಆಸ್ಪತ್ರೆಲೀ ಅವ್ಯವಸ್ಥೆ

devanahalli hospital problem
devanahalli hospital problem
Published on
ಶಾಂತಮೂರ್ತಿ ದೇವನಹಳ್ಳಿ
ದೇವನಹಳ್ಳಿಯ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಅವ್ಯವಸ್ಥೆಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಇಲ್ಲಿನ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಗರ್ಭಿಣಿ, ಬಾಣಂತಿಯರು ಗೋಳಾಡುವಂತಾಗಿದೆ, ಹೆರಿಗೆಗೆ ಬಂದವರನ್ನು ಖಾಸಗಿ ಅಸ್ಪತ್ರೆಗಳಿಗೆ ಶಿಾರಸು ಮಾಡುತ್ತಿರುವ ಪ್ರಕರಣಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಸುಸಜ್ಜಿತ ಕೊಠಡಿಗಳ ಸಹಿತ ಬಹುತೇಕ ಎಲ್ಲ ಸೌಲಭ್ಯಗಳಿವೆ, 14 ಸರ್ಕಾರಿ ವೈದ್ಯರನ್ನು ಸರ್ಕಾರ ನೇಮಿಸಿದೆ ಆದರೆ ಇಲ್ಲಿ ಕರ್ತವ್ಯ ನಿರತ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಕರ್ತವ್ಯ ನಿರತ ವೈದ್ಯರೇ ರೋಗಿಗಳಿಗೆ ದರ್ಶನ ಕೊಡುವುದಿಲ್ಲ. ವೈದ್ಯರ ಬದಲಿಗೆ ಖಾಸಗಿ ಆಸ್ಪತ್ರೆಯ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು ಎದುರುಗೊಳ್ಳುತ್ತಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ರಾತ್ರಿ ವೇಳೆ ವೈದ್ಯರು ಮಾಯ!
ರಾತ್ರಿ ಪಾಳಿಯಲ್ಲಂತೂ ವೈದ್ಯರೇ ಕಾಣುವುದಿಲ್ಲ. ಒಂದಿಬ್ಬರು ಕಂಡರೂ ರೋಗಿಗಳಿಗೆ ಸ್ಪಂದಿಸುವ ತಾಳ್ಮೆ ಇರುವುದಿಲ್ಲ. ಸ್ಟಾಫ್ ನರ್ಸಗಳ ಕೊರತೆಯೂ ಜನರಿಗೆ ಬೇಸರ ತರಿಸಿದೆ. ವೈದ್ಯರಿಗಾಗಿ ಸುಸಜ್ಜಿತ ವಸತಿ ಗೃಹಗಳಿದ್ದರೂ ಕೇಂದ್ರ ಸ್ಥಾನದಲ್ಲಿ ವೈದ್ಯರು ಠಿಕಾಣಿ ಹಾಕಿಲ್ಲ. ಬದಲಿಗೆ ಬೆಂಗಳೂರು ಸೇರಿ ಇನ್ನಿತರ ಕಡೆಗಳಿಂದ ಬಂದು ಹೋಗುವವರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹೆರಿಗೆಗೆ ಬರುವವರನ್ನು ದೇವರೇ ಕಾಪಾಡಬೇಕು ಎಂಬ ಸಂದಿಗ್ಧ ಸ್ಥಿತಿ ಕಂಡುಬರುತ್ತಿದೆ.
ವೈದ್ಯಾಧಿಕಾರಿಗಳು ಸಿಗುವುದೇ ಇಲ್ಲ:
ಪ್ರತಿನಿತ್ಯ ಸಾವಿರಾರು ಬಂದಿ ಬಂದು ಹೋಗುವ ಆಸ್ಪತ್ರೆಯಲ್ಲಿ ಇಲ್ಲಿನ ಅವ್ಯವಸ್ಥೆ ಬಗ್ಗೆ ದೂರು ನೀಡಲು ಇಲ್ಲಿನ ಆಡಳಿತ ವೈದ್ಯಾಧಿಕಾರಿ ಸಿಗುವುದೇ ಇಲ್ಲ. ದೂರವಾಣಿ ಕರೆ ಮಾಡಿದರೂ ಅತ್ತ ಕಡೆಯಿಂದ ಸ್ಪಂದನೆ ಸಿಗುವುದಿಲ್ಲ ಎಂಬುದು ಬಹಳಷ್ಟು ಸಾರ್ವಜನಿಕರ ಆರೋಪವಾಗಿದೆ.
ವೈದ್ಯರೇ ಹೆದರಿಸುತ್ತಾರೆ!
ಇಲ್ಲಿ ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರಿಗೆ ಪ್ರಸೂತಿ ಮಾಡಿಸಲು ಪ್ರಸೂತಿ ತಜ್ಞರಿಲ್ಲ ಎಂಬ ನೆಪವೊಡ್ಡುತ್ತಾರೆ, ಅನೇಕ ಸಂದರ್ಭಗಳಲ್ಲಿ ಗರ್ಭದಲ್ಲಿರುವ ಮಗುವಿಗೆ ಅಪಾಯವಿದೆ ಇಲ್ಲಿ ಹೆರಿಗೆ ಮಾಡಿದರೆ ತಾಯಿ ಅಥವಾ ಮಗುವಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರೇ ಹೆದರಿಸಿ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡುತ್ತಾರೆ. ಇದರ ಹಿಂದೆ ಖಾಸಗಿ ಆಸ್ಪತ್ರೆ ಹಾಗೂ ಇಲ್ಲಿನ ವೈದ್ಯರ ನಡುವೆ ಒಳ ಒಪ್ಪಂದವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಖಾಸಗಿಯಲ್ಲಿ ಸಹಜ ಹೆರಿಗೆ:
ಪ್ರಕರಣವೊಂದರಲ್ಲಿ ದೇವನಹಳ್ಳಿ ತಾಲೂಕಿನ ಭೂವನಹಳ್ಳಿ ಗ್ರಾಮದ ಆನಂದ್ ಎಂಬವರ ಪುತ್ರಿ ಗರ್ಭಿಣಿಯಾದಾಗಿನಿಂದ ಇದೇ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ತಪಾಸಣೆ ಮಾಡಿಸಿದ್ದರು. ಆಕೆಗೆ ಜೂ.21ರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಇದೇ ಆಸ್ಪತ್ರೆಗೆ ದಾಖಲಿಸಲಾಯಿತು. ಗರ್ಭಿಣಿಯನ್ನು ಪರೀಕ್ಷಿಸಿದ ಸಿಬ್ಬಂದಿ ಇಲ್ಲಿ ಮಹಿಳಾ ಪ್ರಸೂತಿ ತಜ್ಞರಿಲ್ಲ ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಕೈಚೆಲ್ಲಿದರು. ಜೂ.22 ರ ಬೆಳಗಿನ ಜಾವ ಗರ್ಭಿಣಿಯನ್ನು ಆಕಾಶ್ ಆಸ್ಪತ್ರೆಗೆ ದಾಖಲಿಸಲಾಯಿತು ಅಲ್ಲಿ 8 ಗಂಟೆ ಸುಮಾರಿಗೆ ಅಲ್ಲಿನ ವೈದ್ಯರು ಸಹಜ ಹೆರಿಗೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಗ್ರಾಪಂ ಮಾಜಿ ಸದಸ್ಯರೂ ಆಗಿರುವ ಆನಂದ್ ಪ್ರತಿಕ್ರಿಯಿಸಿ ನನ್ನ ಮಗಳನ್ನು ಹೆರಿಗೆಗೆ ಇಲ್ಲಿ ಕರೆದುಕೊಂಡು ಬಂದರೆ ಪರೀಕ್ಷಿಸಿದ ಸಿಬ್ಬಂದಿ ಮಗುವಿಗೆ ಕರಳುಬಳ್ಳಿ ಸುತ್ತಿಕೊಂಡಿದೆ ಹೃದಯಾಘಾತವಾಗಿರುವ ಸೂಚನೆ ಕಂಡು ಬರುತ್ತಿದೆ ಕೂಡಲೇ ಬೇರೆಡೆ ಕರೆದುಕೊಂಡು ಹೋಗಿ ಎಂದು ಭಯಪಡಿಸಿದರು. ಆಕಾಶ್ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಸಹಜ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ. ಈ ಪ್ರಕರಣದಿಂದ ಇಲ್ಲಿನ ವೈದ್ಯರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಕಣ್ಣೆದುರೆ ಕಂಡಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದೆ, ಇಲ್ಲಿನ ಎಲ್ಲ ಬಗೆಯ ಸೌಕರ್ಯವೂ ಇದೆ, ಆದರೆ ವೈದ್ಯ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ. ಯಾವಾಗಲೂ ಮುಖ ಗಂಟಿಕ್ಕಿಕೊಂಡು ಮಾತನಾಡಿರುವ ಇಲ್ಲಿನ ಸಿಬ್ಬಂದಿಯೊಂದಿಗೆ ವ್ಯವಹರಿಸಲೇ ಭಯವಾಗುತ್ತದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು.
ಬೈಲಾಂಜಿನಪ್ಪ, ದೇವನಹಳ್ಳಿ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net