ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ, ಮೆಟ್ರೋ

ನೂತನ ಕಚೇರಿ ಕಟ್ಟಡ
ನೂತನ ಕಚೇರಿ ಕಟ್ಟಡ
Published on
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕ ಒದಗಿಸಲು ಆದ್ಯತೆ ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಅಂಬಿಕಾ ಲೇಔಟ್‌ನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ವತಿಯಿಂದ 6.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(ಬಯಪ)ದ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಕುಡಿಯುವ ನೀರಿನ ಪೂರೈಕೆಗೆ ಒತ್ತಡ ಹಾಕುತ್ತಿದ್ದಾರೆ. ಎತ್ತಿನಹೊಳೆ, ಕಾವೇರಿ ನೀರನ್ನು ಈ ಭಾಗಕ್ಕೆ ಕೊಡಲೇ ಬೇಕು ಬೇಡಿಕೆ ಇಟ್ಟಿದ್ದಾರೆ. ಎಲ್ಲ ಸಂಪುಟ ಸಭೆಯಲ್ಲೂ ನೀರಿಗಾಗಿ ಮುನಿಯಪ್ಪ ಒತ್ತಡ ಹಾಕುತ್ತಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಾಗುತ್ತದೆ ಎಂದರು. ನಾನು ನೀರಾವರಿ ಸಚಿವ ಆದ ನಂತರ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಪ್ರತ್ಯೇಕವಾಗಿ ಇಡಲು ನಾನು ಹೊಸ ಸರ್ಕಾರಿ ಆದೇಶ ಮಾಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
2004ರಲ್ಲಿ ಪ್ರಾಧಿಕಾರ ರಚನೆಗೆ ಸಹಿ:
2002 ರಿಂದ 2004 ರಲ್ಲಿ ನಗರಾಭಿವೃದ್ದಿ ಸಚಿವನಾಗಿದ್ದಾಗ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರಚನೆಗೆ ಸಹಿ ಮಾಡಿದೆ. ಬಿಡದಿಯಲ್ಲಿ ಅಥವಾ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಆಗಬೇಕಾ ಎಂಬ ಚರ್ಚೆ ಆಗುತ್ತಿತ್ತು. ಆಗ ಮುಖಂಡರಾದ ಮುನನರಸಿಂಹಯ್ಯ, ರಾಮಯ್ಯ, ಬಚ್ಚೇಗೌಡ ಅವರು ಈ ಭಾಗದ ರೈತರನ್ನು ಒಪ್ಪಿಸಿ, ಇಲ್ಲಿ ವಿಮಾನ ನಿಲ್ದಾಣ ಆಗಬೇಕು ಎಂದು ತೀರ್ಮಾನಿಸಲಾಯಿತು ಎಂದು ಡಿಸಿಎಂ ತಿಳಿಸಿದರು. ದೇವನಹಳ್ಳಿಯಲ್ಲಿ 2400 ಎಕರೆಯನ್ನು ಭೂಸ್ವಾಧೀನ ಮಾಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಇದಕ್ಕೆ ವಾಜಪೇಯಿ ಅವರನ್ನು ಕರೆದುಕೊಂಡು ಬಂದು ವಿಧಾನಸೌಧದಲ್ಲಿ ಭೂಮಿಪೂಜೆ ಮಾಡಲಾಯಿತು. ಈ ವಿಮಾನ ನಿಲ್ದಾಣದಿಂದ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ, ಭೂಮಿಗೆ ಎಷ್ಟು ಬೆಲೆ ಬಂತು, ಎಷ್ಟು ಅಭಿವೃದ್ದಿ ಆಯಿತು ಎಂಬುದು ಈ ಭಾಗದ ಜನತೆಗೆ ತಿಳಿದಿದೆ ಎಂದರು.
ಡಿಸಿಎಂಗೆ ಮನವಿ:
ಗ್ರಾಮಾಂತರ ಜಿಲ್ಲೆಗೆ ಮೆಟ್ರೋ ರೈಲು ಸಂಪರ್ಕ, ಕಾವೇರಿ ನೀರು ಹಾಗೂ ಬಯಪ್ಪ ಪ್ರಾಧಿಕಾರಕ್ಕೆ ಅನುದಾನವನ್ನು ಕಲ್ಪಿಸುವಂತೆ ಉಪಮುಖ್ಯಮಂತ್ರಿಗಳಲ್ಲಿ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಉಸ್ತುವಾರಿ ಸಚಿವರು ಗ್ರಾಮ ಪಂಚಾಯಿತಿ ಬೂತ್ ಮಟ್ಟದಲ್ಲಿ ಹೊಸ ಹುರುಪು ನೀಡಿದ್ದಾರೆ. ದೇವನಹಳ್ಳಿಯೂ ಅಭಿವೃದ್ದಿ ಹೊಂದುತ್ತಿದ್ದು, ಕೈಗಾರಿಕೋದ್ಯಮ ಹೆಚ್ಚಾಗುತ್ತಿದೆ. ಇದರಿಂದ ದೇವನಹಳ್ಳಿಗೆ ಮೆಟ್ರೋ ಸಂಪರ್ಕ ಅಗತ್ಯವಾಗಿದೆ. ದೇವನಹಳ್ಳಿಗೆ ಮೆಟ್ರೋ ಸಂಪರ್ಕವನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ. ಆದಷ್ಟು ಬೇಗ ಇದಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಮತ್ತೆ ಮಾತನಾಡಿದ ಕೆ.ಎಚ್.ಮುನಿಯಪ್ಪ ದೇವನಹಳ್ಳಿ, ವಿಜಯಪುರಕ್ಕೆ ಕಾವೇರಿ ಕುಡಿಯುವ ನೀರು ಕೊಡಬೇಕು. 100 ವರ್ಷ ಇತಿಹಾಸ ಇರುವ ದೇವನಹಳ್ಳಿ, ವಿಜಯಪುರ ಪುರಸಭೆಗೆ ಯುಜಿಡಿ ಕೆಲಸಕ್ಕೆ ಆದ್ಯತೆ ನೀಡಬೇಕು. ಎತ್ತಿನ ಹೊಳೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಆದಷ್ಟು ಬೇಗ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸುವ ಕೆಲಸ ಆದಷ್ಟು ಬೇಗ ಮಾಡಬೇಕು. ಬಯಪ್ಪ ಕೆಲಸಗಳಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net