ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆ ಈ ಹಿಂದಿನಿಂದಲೂ ಇದೆ, ಕಚೇರಿ ಸಮಯಕ್ಕೆ ಸರಿಯಾಗಿ ಬರದಿರುವುದು, ಕಾಫಿ ಬ್ರೇಕ್, ಲಂಚ್ ಬ್ರೇಕ್ ಕಾರಣವೊಡ್ಡಿ ಗಂಟೆಗಟ್ಟಲೆ ಕಚೇರಿಯತ್ತ ಸುಳಿಯದೇ ಇರುವುದು, ಸಂಜೆ ಕಚೇರಿ ಸಮಯಕ್ಕೂ ಮುನ್ನವೇ ಕುರ್ಚಿ ಖಾಲಿ ಮಾಡುವುದು ಸಾಮಾನ್ಯ ಎನ್ನುವಂತ ಪರಿಸ್ಥಿತಿ ಇರುತ್ತದೆ. ಗ್ರಾಮಾಂತರ ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನವೂ ಇದಕ್ಕೆ ಹೊರತಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವ ನಡುವೆಯೇ ಜಿಲ್ಲಾಧಿಕಾರಿ ನಡೆಸಿದ ರಿಯಾಲಿಟಿ ಚೆಕ್ ಸಾಕಷ್ಟು ಪರಿಣಾಮ ಬೀರಿದೆ. ಅಧಿಕಾರಿ ವರ್ಗಕ್ಕೂ ಕರ್ತವ್ಯ ಪಾಲನೆಯ ಅಲರ್ಟ್ ರವಾನೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದೇ ರೀತಿ ನಾಲ್ಕೂ ತಾಲೂಕುಗಳಲ್ಲಿನ ತಾಲೂಕು ಕಚೇರಿಗಳಲ್ಲಿ ತಹಸೀಲ್ದಾರ್ ರಿಯಾಲಿಟಿ ಚೆಕ್ ನಡೆಸಿ ಸಿಬ್ಬಂದಿ ವರ್ಗವನ್ನು ಎಚ್ಚರಿಸದಿದ್ದರೆ ಆಡಳಿತ ಯಂತ್ರ ನಿದ್ರಾವಸ್ಥೆಯಲ್ಲೇ ಇರಲಿದೆ ಇಂತ ಪ್ರಯತ್ನಗಳು ಎಲ್ಲ ಕಡೆ ಆಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.