ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಆಪತ್ತು!

Danger to groundwater!
Danger to groundwater!
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ನಿರ್ಮಾಣವಾಗುವ ಆತಂಕಕಾರಿ ಬೆಳವಣಿಗೆ ಕಂಡುಬರುತ್ತಿದೆ.
ನೀರಿನ ಮರುಬಳಕೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು, ನೀರಿನ ಸೆಲೆಗಳ ರಕ್ಷಣೆ ಬಗ್ಗೆ ಉದಾಸೀನತೆ ಹಾಗೂ ಮಳೆನೀರು ಕೊಯ್ಲು ಯೋಜನೆಯ ಕಡೆಗಣನೆಯೇ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿಮೂಲಗಳಿಲ್ಲ, ಭಾಗಶಃ ಕೊಳವೆಬಾವಿ ಆಶ್ರಿತ ಜಿಲ್ಲೆಯಲ್ಲಿ ಮಿತಿಮೀರಿದ ಕೊಳವೆಬಾವಿಗಳ ಬಳಕೆಯಿಂದ ಅಂತರ್ಜಲ ಬರಿದಾಗುತ್ತಿದೆ. ಆದರೆ ಬಳಸಿದಷ್ಟು ನೀರಿನ ಮರುಪೂರಣ ಕಾರ್ಯಕ್ಕೆ ಯಾರೊಬ್ಬರೂ ಆಸಕ್ತಿ ತೋರಿಸದಿರುವುದು ನೀರಿನ ಖಜಾನೆಯನ್ನು ಕೊಳ್ಳೆ ಹೊಡೆಯುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಬೊರ್‌ವೆಲ್‌ಗಳಲ್ಲಿ ನೀರು ಸಿಗುವುದು ಅನುಮಾನ:
ಜಿಲ್ಲೆಯಲ್ಲಿ ಸದ್ಯ 700 ರಿಂದ 1200 ಅಡಿಗಳಷ್ಟು ಕೊರೆದರೂ ಬೋರ್‌ವೆಲ್‌ಗಳಲ್ಲಿ ನೀರು ಸಿಗುವುದು ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೈಗಾರಿಕೆಗಳಿಗೆ ಎನ್‌ಒಸಿ ಪಡೆಯಲು ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಉಳಿದಂತೆ ಸರ್ಕಾರಿ ಕಚೇರಿಗಳಲ್ಲಿ, ಅರ್ಪಾಟ್‌ಮೆಂಟ್‌ಗಳು, ಮನೆಗಳಲ್ಲಿ, ರೈತರ ಜಮೀನುಗಳಲ್ಲಿ ಮಳೆ ನೀರಿನ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ನೀರಿನ ಸಂರಕ್ಷಣೆಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಅಂತರ್ಜಲದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ ಅನೇಕ ಕಡೆಗಳಲ್ಲಿ ಅವಕಾಶವಿದ್ದರೂ ನೀರಿನ ಪುನರ್‌ಬಳಕೆಯಾಗುತ್ತಿಲ್ಲ.
ಕೈಗಾರಿಕೆಗಳಿಗಷ್ಟೇ ಸೀಮಿತ:
ಜಿಲ್ಲೆ ಬೃಹತ್ ಕೈಗಾರಿಕಾವಲಯವಾಗಿ ವೇಗವಾಗಿ ಬೆಳೆಯುತ್ತಿವೆ, ನೂರಾರು ಹೊಸ ಕಂಪನಿಗಳೂ ಕಾರ್ಯಾರಂಭ ಮಾಡುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಕಡ್ಡಾಯವಾಗಿ ಮಳೆನೀರು ಕೊಯ್ಲು ಅಳವಡಿಕೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಕಂಪನಿ ಹಾಗೂ ಕಾರ್ಖಾನೆಗಳು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿವೆ. ಆದರೆ ಈ ಯೋಜನೆ ಗೃಹಬಳಕೆ ಹಾಗೂ ಜಮೀನು ನಿರ್ವಹಣೆಗಳಲ್ಲಿ ಕಂಡುಬರುತ್ತಿಲ್ಲ.
ಸಿಎಸ್‌ಆರ್ ಅನುದಾನ ಪ್ರಯೋಜನ:
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಿಎಸ್‌ಆರ್ ಅನುದಾನ ಬಳಕೆಯಲ್ಲಿ ಗ್ರಾಮಾಂತರ ಜಿಲ್ಲೆ ಮುಂದಿದೆ, ಅದರಲ್ಲೂ ಜಲಮೂಲಗಳ ಪುನರುಜ್ಜೀವನಕ್ಕೆ ಹೆಚ್ಚಿನ ಮಟ್ಟದಲ್ಲಿ ಸಿಎಸ್‌ಆರ್ ಅನುದಾನ ಬಳಕೆಯಾಗುತ್ತಿದೆ, ಈ ಹಿಂದಿನ ಡಿಸಿಯಾಗಿದ್ದ ಕರೀಗೌಡರಿಂದ ಆರ್.ಲತಾ, ಡಾ.ಶಿವಶಂಕರ್ ಹಾಗೂ ಪ್ರಸ್ತುತ ಡಿಸಿ ಡಾ.ಕೆ.ಎನ್.ಅನುರಾಧಾರವರೆಗೆ ಎಲ್ಲ ಜಿಲ್ಲಾಧಿಕಾರಿಗಳು ಕೆರೆಗಳ ಜೀರ್ಣೋದ್ಧಾರ, ಕಲ್ಯಾಣಿಗಳ ಪುನರುಜ್ಜೀವನದಂಥ ಕಾರ್ಯಕ್ಕೆ ಒತ್ತು ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಒಂದಷ್ಟು ಒಳ್ಳೆ ಕೆಲಸಗಳಾಗುತ್ತಿದ್ದು ನೀರಿನ ಸೆಲೆಗಳಿಗೆ ಮರುಜೀವ ಬರುತ್ತಿವೆ.
ರೈತಾಪಿ ವಲಯದಲ್ಲಿ ಅರಿವಿನ ಕೊರತೆ?
ಜಿಲ್ಲೆಯಲ್ಲಿ ಬಹುತೇಕ ರೈತರು ಕೊಳವೆಬಾವಿಗಳ ಮೂಲಕವೇ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ ಯಾರೂ ಮಳೆನೀರು ಕೊಯ್ಲು ಅಥವಾ ಮರುಪೂರಣದಂಥ ಕಾರ್ಯಕ್ಕೆ ಒತ್ತು ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳು ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದರೂ ನಿರೀಕ್ಷಿತ ಲ ಸಿಗುತ್ತಿಲ್ಲ. ಅಲ್ಲದೆ ಮನೆಗಳ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಬಗ್ಗೆ ಎಷ್ಟೇ ಸಲಹೆ ಸೂಚನೆ ನೀಡಿದರೂ ಮನೆಗಳ ಮಾಲೀಕರು ಕಿವಿಗೊಡುತ್ತಿಲ್ಲ ಬದಲಿಗೆ ಒಂದಕ್ಕಿಂತ ಒಂದು ಬೊರ್‌ವೆಲ್‌ಗಳನ್ನು ಕೊರೆಸುತ್ತ ಚಿತ್ತ ಹರಿಸುತ್ತಾರೆ. ಕೊಳವೆಬಾವಿಗಳ ಅತಿಯಾದ ಬಳಕೆ ಹಾಗೂ ಮರುಪೂರಣವಿಲ್ಲದಿರುವುದು ಅಂತರ್ಜಲಕ್ಕೆ ಪೆಟ್ಟು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ್ಜಲ ಮಟ್ಟ ನೆಲಮಟ್ಟದಿಂದ ಮೀಟರ್‌ಗಳಲ್ಲಿ
ಮಾರ್ಚ್ 2025 ಮಾರ್ಚ್-2026 ವ್ಯತ್ಯಯ
ದೇವನಹಳ್ಳಿ 20.45 ಮೀ 20.91 ಮೀ -0.46ಮೀ
ದೊಡ್ಡಬಳ್ಳಾಪುರ 23.35 ಮೀ 23.89 ಮೀ -0.55ಮೀ
ಹೊಸಕೋಟೆ 16.45 ಮೀ 18.27 ಮೀ -1.82ಮೀ
ನೆಲಮಂಗಲ 36.69 ಮೀ 37.00 ಮೀ -0.31
ಸರಾಸರಿ 24.23 ಮೀ 24.77 ಮೀ -0.78ಮೀ
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿರುವುದು ನಿಜವಾದರೂ ಅಪಾಯಕಾರಿ ಮಟ್ಟಕ್ಕೆ ತಲುಪಿಲ್ಲ ಎಂಬುದು ಆಶಾದಾಯಕವಾಗಿದೆ. ಜಿಲ್ಲೆಯಲ್ಲಿನ ಎಲ್ಲ ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಆದರೆ ಮನೆಗಳು ಹಾಗೂ ರೈತರು ಜಮೀನುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರಿನ ಮರುಪೂರಣಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತದಿಂದ ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ, ಸಿಎಸ್‌ಆರ್ ನೆರವಿನೊಂದಿಗೆ ಕೆರೆ ಕುಂಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ.
ಪಲ್ಲವಿ, ಹಿರಿಯ ಭೂ ವಿಜ್ಞಾನಿ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net