ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಮಾದರಿ ಶಾಲೆಗಳನ್ನಾಗಿ ರೂಪಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಹಂತದಲ್ಲಿ 97 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಸಿಎಸ್‌ಆರ್ ಅನುದಾನದಡಿ ಶಾಲೆಗಳಿಗೆ ಕಾಯಕಲ್ಪ ಕಲ್ಪಿಸುವ ಯೋಜನೆ ಇದಾಗಿದೆ.
ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಸುಸಜ್ಜಿತ ಶಾಲೆಗಳ ನಿರ್ಮಾಣಕ್ಕಾಗಿ ಹಲವು ಕೈಗಾರಿಕೆಗಳು ಮತ್ತು ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲು ರೂಪುರೇಷೆ ಸಿದ್ದಪಡಿಸಲಾಗಿದೆ. ಕೈಗಾರಿಕಾ ವಲಯಗಳಾಗಿ ಗ್ರಾಮಾಂತರ ಜಿಲ್ಲೆ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಉದ್ಯೋಗ ಅರಸಿ ನೆಲೆ ಕಂಡುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣವೂ ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸುಸಜ್ಜಿತ ಶಾಲಾ ವಾತಾವರಣ ಕಲ್ಪಿಸಿಕೊಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಮೇಜು, ಕುರ್ಚಿ ಪೂರೈಕೆ:
ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಮೇಜು, ಕುರ್ಚಿಗಳ ಪೂರೈಕೆಗೆ ಹಲವು ಕಂಪನಿಗಳು ಮುಂದೆ ಬಂದಿವೆ. ಶೌಚಗೃಹ ನಿರ್ಮಾಣ, ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ, ಆಟದ ಮೈದಾನ, ಮಕ್ಕಳ ಆಟಿಕೆಗಳ ವ್ಯವಸ್ಥೆ ಸೇರಿ ಹಲವು ರೀತಿಯ ನೆರವಿಗೆ ಮುಂದಾಗಿವೆ.
ಶೀಘ್ರ ಕಾರ್ಯರೂಪ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ನಾಲ್ಕೂ ತಾಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ನಡೆಯುತ್ತಿದ್ದು ಶಾಲಾಪೂರ್ವ ಶಿಕ್ಷಣದಿಂದ ದ್ವಿತೀಯ ಪಿಯುಸಿವರೆಗೂ ಕಲಿಕೆಗೆ ಪೂರಕ ವ್ಯವಸ್ಥೆ ಸಿಗಲಿದೆ. ಸಿಎಸ್‌ಅರ್ ಅನುದಾನದ ಸಹಕಾರದಲ್ಲಿ ಜಿಲ್ಲೆಯಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ದಗೊಂಡಿದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅತಿಥಿ ಶಿಕ್ಷಕರ ನೇಮಕ:
ಬಾ ಶೆಟ್ಟಿ ಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ನಿರ್ಮಾಣಕ್ಕೆ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 14 ಕೋಟಿ ರೂ.ವೆಚ್ಚದ ಕಾಮಗಾರಿ, ಹೊಸಕೋಟೆ, ದೇವನಹಳ್ಳಿ ಭಾಗದಲ್ಲಿ ವಿಮಾನ ನಿಲ್ದಾಣ ವತಿಯಿಂದ ಶಾಲೆಗಳ ಅಭಿವೃದ್ಧಿ ಕೆಲಸ ನಡೆದಿದೆ. ಅದೇ ರೀತಿ ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಸಿಎಸ್‌ಆರ್ ಅನುದಾನದ ಮೂಲಕ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ವಿಷಯವಾರು ಬೋಧನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಶೆಟ್ಟಿಹಳ್ಳಿ ಶಾಲೆಯ ಕಾಯಕಲ್ಪ:
ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿನ ಕೈಗಾರಿಕೆಗಳಲ್ಲಿನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈಗಾಗಲೇ ಎಜಾಕ್ಸ್ ಕಂಪನಿಯವರು ಸುಮಾರು 7 ಕೋಟಿ ರೂ.ವೆಚ್ಚದಲ್ಲಿ ಪ್ರಾಥಮಿಕ ಶಾಲೆ ನಿರ್ಮಾಣ ಮಾಡಿದ್ದಾರೆ.ಬಾಶೆಟ್ಟಿಹಳ್ಳಿ ಪ್ರೌಢಶಾಲೆಗೆ ರೆಸೋನೆನ್ಸ್ ಕಂಪನಿ ಸೇರಿ ವಿವಿಧ ಕಂಪನಿಗಳ ಸಹಕಾರದಿಂದ ಹಲವು ಸೌಕರ್ಯಗಳು ಲಭ್ಯವಾಗಿವೆ. ಬಾಶೆಟ್ಟಿಹಳ್ಳಿ ಹಳೆ ಪ್ರಾಥಮಿಕ ಶಾಲೆ ಸ್ಥಳದಲ್ಲಿ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ನಿರ್ಮಾಣಕ್ಕೆ ಮುಂದಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿಗಳಿಗೂ ಸಹಕಾರ:
ಜಿಲ್ಲೆಯಲ್ಲಿನ ಅಂಗವಾಡಿಗಳ ಪ್ರಗತಿಯಲ್ಲಿ ಕಂಪನಿಗಳ ಕೊಡುಗೆ ದೊಡ್ಡದಿದೆ, ದೊಡ್ಡಬಳ್ಳಾಪುರ ದೇವನಹಳ್ಳಿ ಭಾಗಗಳಲ್ಲಿ ಹಲವು ಅಂಗನಗಾಡಿ ಕಟ್ಟಡಗಳ ನವೀಕರಣ, ಹೊಸಕಟ್ಟಡಗಳ ನಿರ್ಮಾಣಕ್ಕೆ ಸಿಎಸ್‌ಆರ್ ಅನುದಾನ ಬಳಸಲಾಗಿದೆ. ಖಾಸಗಿ ಪ್ಲೆಹೋಂಗಳ ಮಾದರಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿಗಳು ಗಮನ ಸೆಳೆಯುತ್ತಿವೆ.
ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಂತದಲ್ಲಿ 97 ಶಾಲೆಗಳನ್ನು ಕರ್ನಾಟಕ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ದಗೊಂಡಿದೆ. ವಿವಿಧ ಕೈಗಾರಿಕೆಗಳು ಹಾಗೂ ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿಕೊಂಡು ಶಾಲೆಗಳ ಅಭಿವೃದ್ಧಿ ಜತೆಗೆ ಅತಿಥಿ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಕಲಿಕಾ ಸಾಮಗ್ರಿ ಪೂರೈಕೆ ಮಾಡಲಾಗುತ್ತಿದೆ.
ಬೈಲಾಂಜಿನಪ್ಪ ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂ.ಗ್ರಾಮಾಂತರ