ದಟ್ಟ ಮಂಜಿನಲ್ಲಿ ಮರೆಯಾದ ಜಿಲ್ಲೆ!

ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ
ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮುಂಜಾನೆ ವೇಳೆ ದಟ್ಟ ಮಂಜು ಆವರಿಸಕೊಳ್ಳುತ್ತಿದ್ದು, ಉಷ್ಣಾಂಶ 14 ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಮಂಜಿನ ಸೆರಗಿನಲ್ಲಿ ಜಿಲ್ಲೆ ಮರೆಯಾದಂತೆ ಭಾಸವಾಗುತ್ತಿದ್ದು ಜಿಲ್ಲೆಯಲ್ಲಿನ ಚಾರಣಗಳತ್ತ ಪ್ರವಾಸಿಗರ ದಂಡು ಕಂಡುಬರುತ್ತಿದೆ.
ಮುಂಜಾನೆ ವೇಳೆ ದಟ್ಟ ಮಂಜು ಆವರಿಸಿಕೊಳ್ಳುತ್ತಿದ್ದು ಮೈ ಕೊರೆಯುವ ಚಳಿ ಕಾಣಿಸಿಕೊಳ್ಳುತ್ತಿದೆ, ವಾಹನ ಸವಾರರಿಗೆ ಎದುರಿನ ರಸ್ತೆಯೇ ಕಾಣದಷ್ಟು ಮಂಜು ಮುಸುಕಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ಇದರಿಂದ ಜಿಲ್ಲೆಯಲ್ಲಿನ ಟೋಲ್‌ಗಳ ಬಳಿ ಮುಂಜಾನೆ ವೇಳೆ ವಾಹನ ದಟ್ಟಣೆಯೂ ಕಂಡುಬರುತ್ತಿದೆ.
ಚಾರಣಗಳತ್ತ ದೌಡು:
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ. ಮುಂಜಾನೆ 6 ಗಂಟೆಯೊಷ್ಟಿತ್ತಿಗೆ ಗುಂಪುಗುಂಪಾಗಿ ಜನರು ಬೆಟ್ಟ ಹತ್ತುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ದೊಡ್ಡಬಳ್ಳಾಪುರ ತಾಲೂಕಿನ ಹುಲುಕುಡಿ ಬೆಟ್ಟ, ದೇವನಹಳ್ಳಿ ತಾಲೂಕಿನ ಕುಂದಾಣ ಬೆಟ್ಟ, ಆವತಿ ಬೆಟ್ಟಗಳಲ್ಲಿ ಪ್ರವಾಸಿಗರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಚರ್ಕಿನ್, ಟ್ರ್ಯಾಕ್‌ಸ್ಯೂಟ್‌ಗಳನ್ನು ತೊಟ್ಟು ಬೆಟ್ಟ ಹತ್ತುವ ಚಾರಣದ ಖುಷಿ ಅನುಭವಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ತಿರುವುಗಳಲ್ಲಿ ಎಚ್ಚರ:
ದಟ್ಟವಾದ ಮಂಜು ಆವರಿಸಿಕೊಳ್ಳುವುದರಿಂದ ರಸ್ತೆಯ ತಿರುವುಗಳು ಗೋಚರಿಸದಂತ ಪರಿಸ್ಥಿತಿ ನಿರ್ಮಾಣವಾಗಿದೆ, ವಾಹನ ಸವಾರರು ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವಾಹನಗಳ ಹೆಡ್‌ಲೈಟ್‌ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಚಾಲನೆ ಮಾಡಬೇಕು. ಹಾಗೆಯೇ ರಸ್ತೆ ಬದಿಯಲ್ಲಿ ಸಾಗುವ ಪಾದಚಾರಿಗಳು ವಾಹನಗಳನ್ನು ಗಮನಿಸಬೇಕು ಎಂದು ಪೊಲೀಸರು
ಗರಿಷ್ಟ 23 ಡಿಗ್ರಿ ಸೆಲ್ಸಿಯಸ್:
ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಸಹಜವಾಗಿ ಅತಿಹೆಚ್ಚು ಚಳಿ ಇರುತ್ತದೆ. ಈ ಬಾರಿ ಮತ್ತಷ್ಟು ಚಳಿ ಹೆಚ್ಚಾಗಿದೆ, ಮುಂಜಾನೆ ಅತ್ಯಂತ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ, ಇದರಿಂದ ಸಹಜವಾಗಿ ಜಿಲ್ಲೆಯಲ್ಲಿ ದಟ್ಟವಾದ ಮಂಜು ಅವರಿಸಿದೆ. ಗರಿಷ್ಟ 23 ಡಿಗ್ರಿ ಸೆಲ್ಸಿಯಸ್ ಕಂಡುಬರುತ್ತಿದೆ, ಮಧ್ಯಾಹ್ನದ ವೇಳೆ ಬಿಸಿಲು ಕಂಡುಬಂದರೂ ಚಳಿಯ ಅನುಭವ ಹಾಗೆಯೇ ಇರುತ್ತದೆ. ಸಂಜೆಯಾಗುತ್ತಿದ್ದಂತೆ ಶೀತಲ ಗಾಳಿಯ ಅನುಭವವಾಗುತ್ತದೆ ತಡರಾತ್ರಿಯಲ್ಲಿ ಅತಿ ಹೆಚ್ಚು ಚಳಿಯ ಅನುಭವವಾಗುತ್ತಿದೆ.
ಆರೋಗ್ಯ ಕಾಳಜಿ ವಹಿಸಿ:
ಥಂಡಿ ವಾತಾವರಣದಿಂದ ಸಾಮಾನ್ಯವಾಗಿ ತಲೆದೋರುವ ಜ್ವರ, ಕೆಮ್ಮು, ಶೀತವಾತ ಸೇರಿ ಸಾಂಕ್ರಮಿಕ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿದೆ. ಮುಂಜಾನೆ ವೇಳೆಯಲ್ಲಿನ ಅತೀ ಶೀತಗಾಳಿಯಲ್ಲಿ ತಿರುಗಾಡಿದರೆ ತಲೆನೋವು, ನೆಗಡಿ ಮತ್ತಿತರ ಸೋಂಕಿಗೆ ಒಳಗಾಗಬಹುದು. ಆದ್ದರಿಂದ ಬೆಚ್ಚನೆಯ ಉಡುಪು ಧರಿಸಬೇಕು, ಸಾಧ್ಯವಾದಷ್ಟು ಬಿಸಿನೀರನ್ನು ಬಳಸಬೇಕು. ಪ್ರಿಡ್ಜ್‌ನಲ್ಲಿನ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು, ಯಾವುದಾದರೂ ರೋಗಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕ ಕೃಷ್ಣರೆಡ್ಡಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಶೀತವಾತಾವರಣ ಕಂಡುಬರುತ್ತದೆ, ಈ ಬಾರಿ ಕನಿಷ್ಟ ತಾಪಮಾನ ಕಂಡುಬರುತ್ತಿದೆ, ಶಿವಗಂಗೆ, ಹುಲುಕುಡಿ, ಆವತಿ, ಕುಂದಾಣ ಸೇರಿ ಜಿಲ್ಲೆಯಲ್ಲಿನ ಶಿಖರಗಳತ್ತ ಚಾರಣಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಚಾರಣಿಗರು ಎಚ್ಚರಿಕೆ ವಹಿಸಬೇಕು. ಚಾರಣದ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಪ್ಲಾಸ್ಟಿಕ್ ಸೇರಿ ಇನ್ನಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು.
ಪ್ರೀತಿ, ಉಪನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ಬೆಂ.ಗ್ರಾಮಾಂತರ
---
ಮುಂಜಾನೆ ವೇಳೆ ದಟ್ಟ ಮಂಜು ಸುರಿಯುತ್ತಿದ್ದು, ಎದುರು ಬರುವ ವಾಹನಗಳು ಕಾಣದಂತ ಪರಿಸ್ಥಿತಿ ಇರುತ್ತದೆ, ಮುಖ್ಯವಾಗಿ ರಸ್ತೆ ತಿರುವುಗಳಲ್ಲಿ ವಾಹನಗಳ ಸಂಚಾರ ಗೋಚರಿಸುವುದಿಲ್ಲ. ಆದ್ದರಿಂದ ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಬೇಕು, ಹೆಡ್‌ಲೈಟ್‌ಗಳನ್ನು ಹಾಕಿರಬೇಕು, ವಾಹನಗಳನ್ನು ವೇಗಮಿತಿಯಲ್ಲಿ ಚಲಾಯಿಸಬೇಕು.
ಸಾದಿಕ್‌ಪಾಷಾ, ಇನ್ಸ್‌ಪೆಕ್ಟರ್, ದೊಡ್ಡಬಳ್ಳಾುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net