ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಶಾಲೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ನ.14ರಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ಆರಂಭಿಸಲಾಗಿದೆ.
ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳನ್ನು ಆಯೋಜಿಸಿ ಮಕ್ಕಳ ಆತ್ಮಸ್ಥೆರ್ಯ ವೃದ್ಧಿಗೆ ಸರ್ಕಾರ ಮಕ್ಕಳ ಗ್ರಾಮ ಸಭೆಗಳನ್ನು ನಡೆಸುವಂತ ಸರ್ಕಾರ ಆದೇಶಿಸಿರುವುದರಿಂದ ಗ್ರಾಮಾಂತರ ಜಿಲ್ಲೆಯ 101 ಪಂಚಾಯಿತಿ ವ್ಯಾಪ್ತಿಯಲ್ಲಿ 10 ವಾರಗಳ ಕಾಲ ಗ್ರಾಮಸಭೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸೂಚನೆ ನೀಡಿದೆ.
ಮಕ್ಕಳ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಹಾಗೂ ಮಕ್ಕಳ ಸ್ನೆಹಿ ಗ್ರಾಮ ಪಂಚಾಯತಿ ಅಭಿಯಾನ ಆರಂಭಿಸಿದ್ದು, ಪ್ರತಿ ಗ್ರಾಪಂ ಸಿಬ್ಬಂದಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಪಂ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.
ಶೈಕ್ಷಣಿಕ ಮಟ್ಟ ಸುಧಾರಣೆ:
ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಈ ಮಹತ್ವದ ಕಾರ್ಯಕ್ರಮವಾಗಿದ್ದು ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. 2006ರಿಂದ ಪ್ರತಿ ವರ್ಷವೂ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಸಿಕೊಂಡು ಬರಲಾಗಿದೆ. ಪ್ರಸ್ತುತ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನ.14 ರಿಂದ ಜ.24ರವೆಗೆ 10 ವಾರಗಳ ಕಾಲ ಮಕ್ಕಳ ಸ್ನೆಹಿ ಗ್ರಾಪಂ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಪಂಗಳಲ್ಲಿ ನಿರಾಸಕ್ತಿ:
ಪ್ರತೀ ವರ್ಷ ಮಕ್ಕಳ ಗ್ರಾಮಸಭೆ ನಡೆಸುವಂತೆ ಸರ್ಕಾರದ ಆದೇಶವಿದ್ದರೂ ಹಲವು ಪಂಚಾಯಿತಿಗಳಲ್ಲಿ ಈ ಬಗ್ಗೆ ನಿರಾಸಕ್ತಿ ತಾಳಲಾಗುತ್ತಿದೆ. ಮತ್ತೆ ಕೆಲವು ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಸಭೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ ಈ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಾಗಿ ಸಭೆ ನಡೆಸಿ ಯಶಸ್ವಿಗೊಳಿಸುವಂತೆ ಜಿಪಂ ತಾಕೀತು ಮಾಡಿದೆ.
ಗ್ರಾಮಸಭೆಯಲ್ಲಿನ ಚಟುವಟಿಕೆಗಳು:
ಮಕ್ಕಳ ಜನನ ನೋಂದಣಿ ಮತ್ತು ಜನನ ಪ್ರಮಾಣ ಪತ್ರಗಳ ವಿತರಣೆ, ಪೌಷ್ಠಿಕ ಆಹಾರ ಕುರಿತು ಮಾರ್ಗದರ್ಶನ ಹಾಗೂ ಜಾಗೃತಿ, ಮಕ್ಕಳಿಗೆ ಚುಚ್ಚುಮದ್ದು ನೀಡುವುದು ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು, ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸುವುದು ಪ್ರಮುಖವಾಗಿವೆ. ವಿಷಯಧಾರಿತ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ನಡೆಸುವುದು ಸೇರಿದೆ.
ಮರಳಿ ಶಾಲೆಗೆ:
ಶಾಲೆಯಿಂದ ಹೊರಗುಳಿದ 11ರಿಂದ 14 ವರ್ಷ ವಯಸ್ಸಿನ ಬಾಲಕಿಯರ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿ ಸಮುದಾಯ ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಾಲೋಚಿಸಿ ಚಾಲ್ತಿಯಲ್ಲಿರುವ ಯೋಜನೆಗಳ ಮೂಲಕ, ಕ್ಷೇತ್ರ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಗ್ರಾಮ ಪಂಚಾಯತಿ ಶಿಕ್ಷಣ ಕಾರ್ಯಪಡ ಮುಂತಾದವುಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ ಶಾಲೆ ಬಿಟ್ಟ ಬಾಲಕಿಯರನ್ನು ಮರಳೀ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳುವುದು. ಶಾಲೆಯಿಂದ ಹೊರಗುಳಿದ 14ರಿಂದ 18 ವರ್ಷ ಮೇಲ್ಪಟ್ಟ ಬಾಲಕಿಯರನ್ನು ಕೌಶಲಾಭಿವೃದ್ಧಿ ತರಬೇತಿ ಅಥವಾ ತೆರೆದ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸುವುದು.
ಇನ್ನಿತರ ಚಟುವಟಿಕೆಗಳು:
ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು, ಮಕ್ಕಳ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಚಿತ್ರಕಲೆ ಕಾರ್ಯಕ್ರಮ, ಸ್ಥಳೀಯ ಸಾಂಪ್ರದಾಯಿಕ ಆಟೋಟಗಳು, ಜಾನಪದ ಗೀತೆಗಳು ಮತ್ತು ರಂಗಭೂಮಿ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮ
ಎಲ್ಲ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಗ್ರಾಮಸಭೆಗಳನ್ನು ಆಯೋಜಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೆರವಿನೊಂದಿಗೆ ಮಕ್ಕಳ ಹಕ್ಕುಗಳು ಮತ್ತು ಅವರಿಗೆ ದೊರೆಯುವ ಸೌಲಭ್ಯ ಹಾಗೂ ರಕ್ಷಣೆ ಕುರಿತು ಅರಿವು ಮೂಡಿಸುವ ವಿನುತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶ್ರೀನಾಥ್ ಗೌಡ ತಾಪಂ ಇಒ ದೇವನಹಳ್ಳಿ
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಗ್ರಾಮ ಸಭೆಗೆ ಚಾಲನೆ ನೀಡಲಾಗಿದೆ. ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗಾಗಿರುವ ಯೋಜನೆಗಳ ಸಂಬಂಧಪಟ್ಟಂತೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಯಾವುದೇ ಪಂಚಾಯಿತಿಗಳು ಈ ಕಾರ್ಯಕ್ರಮದಿಂದ ಹೊರಗುಳಿಬಾರದು ಎಂದು ತಾಕೀತು ಮಾಡಲಾಗಿದೆ.