ಜಿಲ್ಲೆಯಲ್ಲಿನ ಪ್ರಮುಖ ನೀರಿನ ಸೆಲೆಗಳಾದ ಕೆರೆಗಳ ರಕ್ಷಣೆ ಎಲ್ಲ ಜವಾಬ್ದಾರಿಯಾಗಿದೆ, ಯಾವುದೇ ಕಾರಣಕ್ಕೂ ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಕೆರೆಗಳಿಗೆ ಬಿಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ವಾಸಂತಿ ಅಮರ್ ತಾಕೀತು ಮಾಡಿದರು. ದೊದ್ದಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಹಾಗೂ ಕೊಡಿಗೇಹಳ್ಳಿ, ಕಾಡನೂರು ಗ್ರಾಮ ಪಂಚಾಯತಿಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು. ಜಿಲ್ಲೆಯಲ್ಲಿನ ಕೆಲವು ಕೆರೆಗಳಿಗೆ ಹಲವು ಕೈಗಾರಿಕೆಗಳು ಸಂಸ್ಕರಣೆ ಮಾಡದೆ ರಾಸಾಯನಿಕಯುಕ್ತ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಖುದ್ಧು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇಂಥ ಸಂದರ್ಭ ಕಂಡುಬಂದರೆ ತಕ್ಷಣ ಕೈಗಾರಿಕೆಗಳಿಗೆ ನೋಟಿಸ್ ನೀಡಿ ರಾಸಾಯನಿಕ ನೀರು ಹರಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.