ಸುಮಾರು 16 ಗುಂಟೆ ವ್ಯಾಪ್ತಿಯಲ್ಲಿ ಉತ್ಖನನ ನಡೆಸಲು ಉದ್ದೇಶಿಸಲಾಗಿತ್ತು. ಪ್ರಸ್ತುತ ನಾಲ್ಕೈದು ಗುಂಟೆ ವಿಸ್ತೀರ್ಣದಲ್ಲಿ ಉತ್ಖನನ ನಡೆಸಿದ್ದು, ಬೌದ್ಧರು ಶವಸಂಸ್ಕಾರದ ವೇಳೆ ಬಳಸುತ್ತಿದ್ದ ಬೂದಿತುಂಬಿದ ಮಡಿಕೆ(ಬೂದಿಗುಂಡಿ), ಮಂದಿರ ನಿರ್ಮಾಣಕ್ಕೆ ಬಳಸುತ್ತಿದ್ದ ಇಟ್ಟಿಗೆಗಳು, ಬಿಕ್ಷಾಪಾತ್ರೆಗಳೂ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಆದರೆ ಇದಕ್ಕೂ ಮುನ್ನ ನಡೆದ ಹಲವು ಸಂಶೋಧನೆಯಲ್ಲಿ ಹಿಂದು ರಾಜವಂಶಸ್ಥರ ಹಲವು ಕುರುಹುಗಳು ಪತ್ತೆಯಾಗಿವೆ, ವೀರಗಲ್ಲುಗಳು, ಕೆಲವು ಶಿಲಾಶಾಸನಗಳು ಹಿಂದು ದೇವತೆಗಳ ವಿಗ್ರಹಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇಂದಿಗೂ ಈ ಸ್ಥಳದಲ್ಲಿ ಹೊಲದೇಶ್ವರ ಎಂಬ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಕಂಬದ ಮೇಲಿನ ಗಣಪಮೂರ್ತಿ ಸೇರಿ ಪಂಚಲಿಂಗೇಶ್ವರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದ್ದು, ಈ ಜಾಗವನ್ನು ಒಟ್ಟುಗೂಡಿ ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿಪಡಿಸಬೇಕೆ ಹೊರತು ಯಾವುದೋ ಒಂದು ಧರ್ಮದ ನೆಲೆಯಾಗಿ ಗುರುತಿಸಬಾರದು ಎಂಬುದು ಸ್ಥಳೀಯ ಮುಖಂಡರ ಅಭಿಮತವಾಗಿದೆ.