ನೂತನ ರಥವೇರಿದ ಅವಿಮುಕ್ತೇಶ್ವರ

Brahmarathotsava
Brahmarathotsava
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವರ್ಷದಿಂದ ವರ್ಷಕ್ಕೆ ಅದ್ಧೂರಿತವನ್ನು ಇಮ್ಮಡಿಗೊಳಿಸಿಕೊಳ್ಳುತ್ತಿರುವ ಹೊಸಕೋಟೆಯ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಮತ್ತಷ್ಟು ವಿಜೃಂಭಣೆಯಾಗಿ ಸಂಪನ್ನಗೊಂಡಿತು.
ಈ ವರ್ಷದ ವಿಶೇಷವಾಗಿ ನೂತನ ರಥವೇರಿದ ಶ್ರೀ ಅವಿಮುಕ್ತೇಶ್ವರ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದ ದೃಶ್ಯ ಕಂಡುಬಂತು. ಭಕ್ತರ ಜಯೋಷ ಮುಗಿಲುಮುಟ್ಟಿತ್ತು. ಭಕ್ತ ಸಮೂಹದಿಂದ ಹೊರಹೊಮ್ಮುತ್ತಿದ್ದ ಅವಿಮುಕ್ತೇಶ್ವರಿಗೆ ಜೈ ಎಂಬ ಕರತಾನಡ ಉತ್ಸವದ ಅದ್ಧೂರಿತನಕ್ಕೆ ಸಾಕ್ಷಿಯಾಯಿತು. ಹೊಸಕೋಟೆ ಸೇರಿ ನೆರೆಯ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತರು ರಥದ ಮೆರವಣಿಗೆಯೊಂದಿಗೆ ಸಾಗಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಹೊಸಕೋಟೆ ನಗರದ ತುಂಬೆಲ್ಲ ಭಕ್ತಸಾಗರವೇ ತುಂಬಿತುಳುಕುತ್ತಿತ್ತು. ಸಾಗರೋಪಾದಿಯಲ್ಲಿ ಹರಿದುಬರುತ್ತಿದ್ದ ಜನಸಾಗರದ ನಡುವೆ ಬಾನೆತ್ತರದ ನೂತನ ರಥದ ಮೆರವಣಿಗೆ ಗಮನ ಸೆಳೆಯಿತು.
ಮಧ್ಯಾಹ್ನ 1.05 ಕ್ಕೆ ಉತ್ಸವಕ್ಕೆ ಚಾಲನೆ:
ಶುಕ್ರವಾರ ಬೆಳಗ್ಗೆ 12 ಗಂಟೆಗೆ ಶ್ರೀ ಅವಿಮುಕ್ತೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಶಾಸಕ ಶರತ್ ಬಚ್ಚೇಗೌಡ, ಕನ್ವಿನರ್ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್ ಸೇರಿ ಹಲವು ಮುಖಂಡರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ತಾಲೂಕು ಕಚೇರಿ ಮುಂಭಾಗದ ರಥದ ಬಳಿಗೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು. ಮಧ್ಯಾಹ್ನ 1:05ಕ್ಕೆ ರಥಕ್ಕೆ ಪೂಜೆ ಸಲ್ಲಿಸಿ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಕಲಾತಂಡಗಳ ಮೆರಗು:
ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಬಾಳೆ ಹಣ್ಣ, ಕಲ್ಲುಪ್ಪು, ಕಾಳು ಮೆಣಸು, ತೇರಿನತ್ತ ಎಸೆಯುವ ಮೂಲಕ ಭಕ್ತರು ಹರಕೆ ತೀರಿಸುತ್ತಿದ್ದ ದೃಶ್ಯ ಕಂಡುಬಂತು. ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿ ಹಲವು ಕಲಾ ತಂಡಗಳು ವಿವಿಧ ತಮಟೆ ವಾದ್ಯ ತಂಡಗಳು ಉತ್ಸವಕ್ಕೆ ಮೆರಗು ನೀಡಿದವು. ಲಕ್ಷಾಂತರ ಭಕ್ತರು ಪಾಲ್ಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬೀಸಿಗೆ ಬೇಗೆ ತಣಿಸಲು ಮಜ್ಜಿಗೆ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.
ಗಣ್ಯರು ಭಾಗಿ:
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವ ಆಚರಣೆ ಸಮಿತಿ ಕನ್ವಿನರ್ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ,ವಿ ಬೈರೇಗೌಡ, ಪ್ರಧಾನ ಅರ್ಚಕ ರವಿಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಸುಬ್ಬರಾಜ್, ಮುಖಂಡರಾದ ಸಿ. ಜಯರಾಜ್, ಸುಭಾಷ್ ಗೌಡ, ಸದಾನಂದ್ ಸೇರಿ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net