ನಂಬರ್‌ಪ್ಲೇಟ್ ಕಳಚಿಟ್ಟು ವೀಲಿಂಗ್

ಹೆದ್ದಾರಿಗಳಲ್ಲಿ ಪುಂಡರ ಪುಂಡಾಟ
ಹೆದ್ದಾರಿಗಳಲ್ಲಿ ಪುಂಡರ ಪುಂಡಾಟ
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಹೆದ್ದಾರಿಗಳು ಪುಂಡರ ಪುಂಡಾಟಗಳಿಗೆ ರಹದಾರಿಯಾಗಿ ಮಾರ್ಪಟ್ಟಿದೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ವಾಹನಗಳ ನಂಬರ್‌ಪ್ಲೇಟ್ ಕಳಚಿಟ್ಟು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಹೀಗೆ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ಚಲಾಯಿಸುವ ಪುಂಡರು ಹೆದ್ದಾರಿಗಳಲ್ಲಿ ಸಾಗುವ ಇನ್ನಿತರ ಪ್ರಯಾಣಿಕರ ಪ್ರಾಣಕ್ಕೆ ಕುತ್ತುತರುವಂಥ ಪರಿಸ್ಥಿತಿ ಎದುರಾಗುತ್ತಿದೆ.
ಹೌದು..! ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಭಾಗಗಳಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಗ್ಯಾಂಗ್ ಗುಂಪು ಗುಂಪಾಗಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೀಲಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಅಪಾಯಕಾರಿ ಕೃತ್ಯಗಳಿಂದ ಇನ್ನಿತರ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾಗಿದ್ದಾರೆ.
ನಾಗದೇನಹಳ್ಳಿ ಹೆದ್ದಾರಿಯಲ್ಲಿ ಹೆಚ್ಚು:
ದೊಡ್ಡಬಳ್ಳಾಪುರ ತಾಲೂಕು ನಾಗದೇನಹಳ್ಳಿ ಗ್ರಾಮ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುವ ದೃಶ್ಯಗಳು ಹೆಚ್ಚು ಕಂಡುಬರುತ್ತಿವೆ. ಕಾಲೇಜುಗಳ ಸಂಖ್ಯೆ ಹೆಚ್ಚಿರುವ ಈ ಪ್ರದೇಶದಲ್ಲಿ ಪುಂಡಾಟಿಕೆ ಹೆಚ್ಚಿತ್ತು ಇನ್ನಿತರರ ಪ್ರಾಣದ ಜತೆಗೆ ಹುಡುಕಾಟ ಆಡುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ನೆಲಮಂಗಲ ಟೋಲ್ ದಾಟಿದ ಬಳಿಕವೂ ಇಂಥ ದೃಶ್ಯಗಳು ಕಂಡುಬರುತ್ತಿವೆ. ದೇವನಹಳ್ಳಿ ಹೊಸಕೋಟೆ ಭಾಗಗಳಲ್ಲಿ ಈ ಕಿಡಿಗೇಡಿಗಳ ಹಾವಳಿ ಮಿತಿಮೀರಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಡುಗಿಯರ ಮುಂದೆ ಶೋ:
ಜಿಲ್ಲಾ ವ್ಯಾಪ್ತಿಯಲ್ಲಿನ ಹಲವು ಕಾಲೇಜುಗಳ ಬಳಿ ಪುಂಡರು ಬೈಕ್ ವೀಲಿಂಗ್ ಮಾಡಿ ಕಾಲೇಜು ಹುಡುಗಿರ ಮುಂದೇ ಶೋ ಕೊಡಲು ಪ್ರಯತ್ನಿಸುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇವರ ಈ ಅಪಾಯಕಾರಿ ಚಾಲನೆ ಅವರ ಪ್ರಾಣವಲ್ಲದೆ ಇನ್ನಿತರರ ಪ್ರಾಣಕ್ಕೂ ಎರಕವಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಲತಾಣಗಳಲ್ಲಿ ವೈರಲ್:
ಇತ್ತೀಚೆಗೆ ಹಲವು ಪುಂಡರು ಗುಂಪಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪುಂಡರ ಹಾವಳಿಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಒತ್ತಡ ಹೇರುವ ಸಂದೇಶಗಳು ರವಾನೆಯಾಗಿದ್ದವು.
ಗ್ರಾಮಾಂತರ ಪೊಲೀಸರ ಬೇಟೆ:
ಹೆದ್ದಾರಿಗಳಲ್ಲಿ ವಾಹನಗಳ ನಂಬರ್‌ಪ್ಲೇಟ್ ಬಿಚ್ಚಿಟ್ಟು ಪುಂಡಾಟ ಮೆರೆಯುತ್ತಿರುವ ದೃಶ್ಯಗಳನ್ನು ಗಮನಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ವಿಶೇಷ ಕಾರ್ಯಾಚರಣೆ ರೂಪಿಸಿ ಇಬ್ಬರು ಪುಂಡರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ನಗರದ ವಸೀಂಪಾಷಾ (19) ಹಾಗೂ ಶುಕೂರ್‌ಮಿಯಾ(20) ಎಂಬುವರನ್ನು ಬಂಧಿಸಿ ಇಬ್ಬರ ವಿರುದ್ಧ ಎ್ಐಆರ್ ದಾಖಲಿಸಿದ್ದಾರೆ. ವೀಲಿಂಗ್ ಬಳಸುತ್ತಿದ್ದ ವಾಹವನ್ನು ಜಪ್ತಿ ಮಾಡಿ ದುಬಾರಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಪೊಲೀಸರಿಂದಲೇ ಪೋಸ್ಟ್:
ಇತ್ತೀಚಿಗೆ ನಾಗದೇನಹಳ್ಳಿ ಹೆದ್ದಾರಿಯಲ್ಲಿ ಪುಂಡರು ವೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ಎಡಿಟ್ ಮಾಡಿರುವ ಪೊಲೀಸರು ಬಂಧಿತ ಆರೋಪಿಗಳ ಪೊಟೋಜತೆಗೆ ಲಿಂಕ್ ಮಾಡಿ ಮೊದಲು ನಂತರ ಎಂಬ ಕ್ಯಾಪ್ಷನ್‌ನಲ್ಲಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ವೀಲಿಂಗ್ ಮೋಜಿಗೆ ಹೋದರೆ ಪೊಲೀಸರ ಅತಿಥಿಯಾಗಬೇಕಾಗುತ್ತದೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ಸಾರುವ ಮೂಲಕ ಎಚ್ಚರಿಕೆ ರವಾನಿಸಿದ್ದಾರೆ.
ಕೆಲವೇ ಕ್ಷಣದ ಮೋಜು ಅವರ ಪ್ರಾಣಕ್ಕಷ್ಟೇ ಅಲ್ಲದೆ ಇನ್ನಿತರರ ಜೀವಕ್ಕೂ ಕಂಟಕವಾಗುತ್ತದೆ, ಇಂಥ ಹುಚ್ಚಾಟಗಳನ್ನು ಬಿಡಬೇಕು. ಬೈಕ್ ವೀಲಿಂಗ್ ಎಂಬ ಪುಂಡಾಟ ಕಂಡುಬಂದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈಗಾಗಲೇ ಬಂಧಿತರ ಮೇಲೆ ಎ್ಐಆರ್ ದಾಖಲಿಸಲಾಗಿದೆ, ವಾಹನ ಜಪ್ತಿ ಮಾಡಿ ದಂಡ ವಿಧಿಸಲಾಗಿದೆ. ಪಾಲಕರೂ ಮಕ್ಕಳ ಮೇಲೆ ನಿಗಾವಹಿಸಬೇಕು.
ಸಾದಿಕ್‌ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net