ಗೊಂದಲಗಳ ನಡುವೆ ಗೃಹಜ್ಯೋತಿ ಚುರುಕು

bescom gruahajyoti
bescom gruahajyoti
Published on
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಹಲವು ಗೊಂದಲಗಳು, ಸಾರ್ವಜನಿಕ ಅಸಮಾಧಾನ, ಬೆಸ್ಕಾಂ ಸಿಬ್ಬಂದಿ ಪರದಾಟದ ನಡುವೆಯೂ
ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ.
ಗೃಹಜ್ಯೋತಿ ಮರುಪರಿಶೀಲನೆ ವಿಷಯದಲ್ಲಿ ಬೆಸ್ಕಾಂ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿವೆ. ಇದರ ನಡುವೆ ಜು.31 ಲಾನುಭವಿಗಳ ಮರುಪರಿಶೀಲನೆ ಅಂತ್ಯವಾಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದ್ದು, ಲಾನುಭವಿಗಳು ಆತಂಕಗೊಳ್ಳುವುದರ ಜತೆಗೆ ಬೆಸ್ಕಾಂ ಸಿಬ್ಬಂದಿ ವಿರುದ್ಧ ಹರಿಹಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಏನತ್ಮಧ್ಯೆ ಬೆಸ್ಕಾಂ ಅಧಿಕಾರಿಗಳು ಜು.31 ಅಂತ್ಯವಲ್ಲ ಆಗಸ್ಟ್‌ವರೆಗೆ ವಿಸ್ತರಿಸಲಾಗಿದೆ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಮನೆ ಮನೆ ಭೇಟಿ ಇಲ್ಲ ಎಂಬ ಆರೋಪ:
ಸರ್ಕಾರ ಬೆಸ್ಕಾಂನ ಮೀಟರ್ ರೀಡರ್‌ಗಳು ಮನೆ ಮನೆಗೆ ಭೇಟಿ ನೀಡಿ ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ. ಆದರೆ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಮೀಟರ್ ರೀಡರ್‌ಗಳು ಮನೆ ಮನೆ ಭೇಟಿ ಮಾಡುತ್ತಿಲ್ಲ. ಮನೆಗಳ ಬಳಿ ಇದುವರೆಗೆ ಯಾವುದೇ ಬೆಸ್ಕಾಂ ಸಿಬ್ಬಂದಿ ಕಾಣಿಸಿಕೊಂಡಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಇದರ ಜತೆಗೆ ಎಲ್ಲೆಂದರಲ್ಲಿ ಸಾರ್ವಜನಿಕರನ್ನು ಗುಂಪುಗೂಡಿಸಿಕೊಂಡು ಮರುಪರಿಶೀಲನೆ ನಡೆಸುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೈಗಾರಿಕಾ ಪ್ರದೇಶಗಳೇ ಸವಾಲು:
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯ ಕೈಗಾರಿಕಾ ವಲಯಗಳಲ್ಲಿ ಗೃಹಜ್ಯೋತಿ ಮರುಪರಿಶೀಲನೆ ಬೆಸ್ಕಾಂ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಮುಂಜಾನೆ 7 ಗಂಟೆಗೆಲ್ಲ ಕೆಲಸಕ್ಕೆ ಹೊರಟು ಬಿಟ್ಟಿರುತ್ತಾರೆ. ರಾತ್ರಿ 7 ಗಂಟೆವರೆಗೆ ಮನೆಯಲ್ಲಿ ಯಾರೂ ಇರುವುದಿಲ್ಲ ಇದರಿಂದ ಮನೆ ಭೇಟಿ ನೀಡಿದರೂ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬೆಸ್ಕಾಂ ಸಿಬ್ಬಂದಿಯ ಪ್ರತಿಕ್ರಿಯೆಯಾಗಿದೆ.
ಬಾಡಿಕೆ ಕರಾರು ಇಲ್ಲದಿದ್ದರೂ ಓಕೆ:
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮರುಪರಿಶೀಲನೆಗೆ ಬಾಡಿಗೆ ಕರಾರು ಪತ್ರದ ದಾಖಲೆ ನೀಡುವುದು ಕಷ್ಟಸಾಧ್ಯ ಎಂಬ ಮಾತು ಕೇಳಿಬರುತ್ತಿದೆ. ಬಹುತೇಕರು ಬಾಡಿಗೆ ಕರಾರು ಮಾಡಿಕೊಂಡಿಲ್ಲ. ಇನ್ನು ಹಲವರು ಅವುಗಳನ್ನು ನವೀಕರಣ ಮಾಡಿಕೊಂಡಿರುವುದಿಲ್ಲ ಇದರಿಂದಾಗಿ ಈ ದಾಖಲೆ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿ ಅಂಥ ಲಾನುಭವಿಗಳಿಗೆ ಪ್ರತ್ಯೇಕವಾಗಿ ಅಗ್ರಿಮೆಂಟ್ ಮಾದರಿಯಲ್ಲಿ ಕಡತ ಸಿದ್ದಪಡಿಸಿ ಅವುಗಳಲ್ಲಿ ಸಹಿ ಹಾಕಿಸಿಕೊಂಡು ಪ್ರಕ್ರಿಯೆ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.
ಸ್ವಯಂ ಸೇವಕರ ನೇಮಕ:
ಜಿಲ್ಲೆಯ ಎಲ್ಲ ಕಡೆಗಳಲ್ಲೂ ಕಡ್ಡಾಯವಾಗಿ ಮೀಟರ್ ರೀಡರ್‌ಗಳು ಮನೆ ಮನೆಗೆ ಭೇಟಿ ನೀಡಿ ಮರುಪರಿಶೀಲನೆ ನಡೆಸುವಂತೆ ಬೆಸ್ಕಾಂ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ ನೆಟ್‌ವರ್ಕ್ ಸಮಸ್ಯೆ, ಮನೆಗಳಲ್ಲಿ ಲಾನುಭವಿಗಳು ಇಲ್ಲದಿರುವುದು, ಎಸ್‌ಐಆರ್ ಪ್ರಕ್ರಿಯೆಲ್ಲಿ ಸಿಬ್ಬಂದಿ ತೊಡಗಿಸಿಕೊಂಡಿರುವುದರಿಂದ ಗೃಹಜ್ಯೋತಿ ಪ್ರಕ್ರಿಯೆಗೆ ಸಿಬ್ಬಂದಿ ಕೊರತೆ ಎದುರಾಗಿರುವುದು ಸೇರಿ ಹಲವು ಕಾರಣಗಳಿಂದ ಕೆಲವು ಆಯಕಟ್ಟಿನ ಜಾಗಗಳಲ್ಲಿ ಕುಳಿತು ಸ್ವಯಂ ಸೇವಕರನ್ನು ಬಳಿಸಿಕೊಂಡು ಬೆಸ್ಕಾಂ ಸಿಬ್ಬಂದಿ ಪ್ರಕ್ರಿಯೆ ನಡೆಸುವ ಪ್ರಹಸನ ಮುಂದುವರೆಸಿದ್ದಾರೆ.
ಪರಿಶೀಲನೆಯ ಉದ್ದೇಶವೇನು?
ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆಯು ಕೆಲವರಿಂದ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಮತ್ತು ಅನ್ಯ ರಾಜ್ಯದವರೂ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದುರ್ಬಳಕೆಯನ್ನು ತಪ್ಪಿಸಲು ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ.
ಪರಿಶೀಲನೆಗೆ ಅಗತ್ಯ ದಾಖಲೆಗಳು:
* ಆಧಾರ್‌ಕಾರ್ಡ್
* ಮತದಾರರ ಗುರುತಿನ ಚೀಟಿ
* ರೇಷನ್ ಕಾರ್ಡ್
*ಪಾನ್‌ಕಾರ್ಡ್
*ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
*ಬಾಡಿಗೆ ಒಪ್ಪಂದ (ಬಾಡಿಗೆ ಮನೆಯಲ್ಲಿದ್ದರೆ ಮಾತ್ರ)
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಯಾವುದೇ ಗೊಂದಲಕ್ಕೊಳಗಾಗದೆ, ತಮ್ಮ ಬಳಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು, ಆಗಸ್ಟ್ ಅಂತ್ಯದೊಳಗೆ ಪರಿಶೀಲನೆಗೆ ಒಳಪಡಿಸಬಹುದು. ಬೆಸ್ಕಾಂ ವತಿಯಿಂದ ಲಾನುಭವಿಗಳಿಗೆ ಎಲ್ಲ ರೀತಿಯಲ್ಲಿಯೂ ಸಹಕರಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕು.
ಕುಮಾರ್‌ನಾಯಕ್, ಇಇ ಬೆಸ್ಕಾಂ ನೆಲಮಂಗಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net