ಕೆರೆಯಲ್ಲಿ ಬಿದಿರು ಮರಗಳು ಕಣ್ಮರೆ

Bamboo trees disappear
Bamboo trees disappear
Published on
ನಂದಗುಡಿ ಎಂ.ರಾಮೇಗೌಡ
ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಇಟ್ಟಸಂದ್ರಗ್ರಾಮ ಪಂಚಾಯತಿ ವ್ಯಾಪ್ತಿಯ ಗೆದ್ದಲ್ಲಳ್ಳಿಪುರದಲ್ಲಿ 59 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಕಳ್ಳರ ಕೃತ್ಯದಿಂದ ದಿನೆ ದಿನೇ ಬಿದಿರು ಮರಗಳು ಕಣ್ಮರೆಯಾಗುತ್ತಿದ್ದರೂ ಗ್ರಾಪಂ ಅಗಲಿ ಅರಣ್ಯ ಇಲಾಖೆಯಾಗಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ರಾಜಾರೋಷವಾಗಿ ಹಗಲಿನ ವೇಳೆಯೇ ಬಿದಿರು ಮರಗಳನ್ನು ಕಡಿದು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆಯಿಂದಲೇ ಬಿದಿರು ಸಸಿಗಳ ನಾಟಿ ಮಾಡಲಾಗಿತ್ತು. ಆದರೆ ಬಿದಿರು ಮರಗಳನ್ನು ಕಡಿಯುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇಲಾಖೆಯ ಮೇಲೆಯೇ ಸಂಶಯದ ಕಣ್ಣು ಬೀರುವಂತಾಗಿದೆ.
ಆಂದೋಲನ ನೆಪಮಾತ್ರ:
ಅರಣ್ಯ ಇಲಾಖೆ ವತಿಯಿಂದ ಪರಿಸರ ದಿನಾಚರಣೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಗಿಡ ನೆಡಿ ಪರಿಸರ ಉಳಿಸಿ ಎಂಬ ಆಂದೋಲನಗಳನ್ನು ಮಾಡುತ್ತದೆ. ಆದರೆ ಹಲವು ವರ್ಷಗಳಿಂದ ಬೆಳೆದು ನಿಂತಿರುವ ಲಕ್ಷಾಂತರ ರೂ.ಮೌಲ್ಯದ ಬಿದುರು ಮರಗಳ ರಕ್ಷಣೆಗೆ ಇವರ ಕಾಳಜಿ ಇಲ್ಲದಂತಾಗಿದೆ. ಆಂದೋಲನ ಎನ್ನುವುದು ನೆಪಮಾತ್ರ ನಿಜವಾದ ಕಾಳಜಿ ಇಲ್ಲ ಎಂದು ಗ್ರಾಮೀಣ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದುಷ್ಕರ್ಮಿಗಳು ಈಗಾಗಲೇ ನೂರಾರು ದೊಡ್ಡ ಬಿದಿರುವ ಮರಗಳನ್ನು ಕಡಿದು ಸಾಗಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬಿದಿರಿಗೆ ಬಹಳ ಬೇಡಿಕೆ ಇದೆ, ಅರಣ್ಯ ಇಲಾಖೆ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳಸಾಗಣೆದಾರರು ನಿರಾಂತಕವಾಗಿ ಬಿದಿರು ಮರಗಳಿಗೆ ಕೊಡಲಿಪೆಟ್ಟು ಹಾಕುತ್ತಿದ್ದಾರೆ.
ಬನಹಳ್ಳಿ, ಗೆದ್ದಲಹಳ್ಳಿಪುರ, ಹಿಂಡಿಗನಾಳ ವ್ಯಾಪ್ತಿಯವರು ಹಗಲಿನ ವೇಳೆಯಲ್ಲಿಯೇ ಯಂತ್ರದ ಮೂಲಕ ಬಿದಿರು ಮರಗಳನ್ನು ಕಡಿದು ರಾಜಾರೋಷವಾಗಿ ಸಾಗಿಸುತ್ತಿದ್ದಾರೆ. ಇದು ಕಂಡರೂ ಪಂಚಾಯಿತಿ ಸಿಬ್ಬಂದಿಯಾಗಲಿ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಬನಹಳ್ಳಿ ಗ್ರಾಮಸ್ಥರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net