ಬೌದ್ಧನೆಲೆಯಲ್ಲಿ ಬೂದಿಗುಂಡಿ ಪತ್ತೆ

ash-pit-found-in-buddhist
ash-pit-found-in-buddhist
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ರಾಘಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಪುರಾತತ್ವ ಇಲಾಖೆ ಅರಂಭಿಸಿದ್ದ ಉತ್ಖನನ ಕಾರ್ಯ ಮುಕ್ತಾಯಗೊಂಡಿದ್ದು, ಉತ್ಖನನದ ವೇಳೆ ಬೌದ್ಧರು ಶವಸಂಸ್ಕಾರದ ವೇಳೆ ಬಳಸುತ್ತಿದ್ದ ಬೂದಿತುಂಬಿದ ಮಡಿಕೆ(ಬೂದಿಗುಂಡಿ), ಮಂದಿರ ನಿರ್ಮಾಣಕ್ಕೆ ಬಳಸುತ್ತಿದ್ದ ಇಟ್ಟಿಗೆಗಳು, ಬಿಕ್ಷಾಪಾತ್ರೆಗಳೂ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ.
ಇದೊಂದು ಮಹತ್ವಪೂರ್ಣ ಯೋಜನೆ ರೂಪಿಸಲಾಗಿತ್ತು. ಉತ್ಖನನದ ಜಾಗದಲ್ಲೇ ಇಲಾಖೆ ಅಧಿಕಾರಿಗಳು ಬೀಡುಬಿಟ್ಟು ಸತತ 3 ತಿಂಗಳ ಕಾಲ ನಿರಂತವಾಗಿ ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ರಾಜಘಟ್ಟ ಗ್ರಾಮದಲ್ಲಿ ಬಾಡಿಗೆ ಮನೆಗಳನ್ನು ಪಡೆದು ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು. ಪುರಾತತ್ವ ವಿಷಯದಲ್ಲಿ ತಜ್ಞರೆನಿಸಿರುವ ಮೈಸೂರಿನ ನಿವೃತ್ತ ಪ್ರೋೆಸರ್ ಎಂ.ಎಸ್.ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಉತ್ಖನನ ಕಾರ್ಯ ಆರಂಭಿಸಲಾಗಿತ್ತು. ಉತ್ಖನನ ವೇಳೆ ಪತ್ತೆಯಾದ ಬೌದ್ಧರ ಪುರಾತನ ವಸ್ತುಗಳನ್ನು ವಶಕ್ಕೆ ಪಡೆದಿರುವ ಇಲಾಖೆ ಅವುಗಳನ್ನು ಸಂರಕ್ಷಣೆ ಮಾಡಲು ಯೋಜನೆ ರೂಪಿಸಿದೆ.
ಉತ್ಖನನ ಜಾಗ ರಕ್ಷಣೆಗೆ ಪಟ್ಟು:
ಪ್ರಸ್ತುತ ಪುರಾತತ್ವ ಇಲಾಖೆ ಉತ್ಖನನ ಜಾಗವನ್ನು ಮತ್ತೆ ಯಥಾಸ್ಥಿತಿ ತರುವ ಕೆಲಸಕ್ಕೆ ಮುಂದಾಗಬೇಕಾಗಿದೆ, ಮಳೆಗಾಲವಾದ್ದರಿಂದ ಉತ್ಖನನ ಜಾಗದಲ್ಲಿ ತೆರೆದ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಕಾರಣ ಅವುಗಳನ್ನು ಮುಚ್ಚುವ ಕೆಲಸ ಆಗಬೇಕಿದೆ. ಆದರೆ ಬೌದ್ಧ ಸಮುದಾಯದ ಮುಖಂಡರು ಈ ಜಾಗದ ರಕ್ಷಣೆಗೆ ಪಟ್ಟು ಹಿಡಿದಿದ್ದಾರೆ. ರೈತರ ಮನವೊಲಿಸಿ ಜಾಗವನ್ನು ಪಡೆಯುವ ಪಯತ್ನ ನಡೆಸುತ್ತಿದ್ದಾರೆ. ಸರ್ಕಾರ ಮಟ್ಟದಲ್ಲಿಯೂ ಪ್ರಯತ್ನ ನಡೆಸುತ್ತಿದ್ದು ಶತಾಯಗತಾಯ ಉತ್ಖನನ ಜಾಗವನ್ನು ಪಾರಂಪರಿಕ ಸ್ಥಳವನ್ನಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರಿಂದಾಗಿ ಇಲಾಖೆಯೂ ಮೃಧುಧೋರಣೆ ಅನುಸರಿಸುತ್ತಿದ್ದು, ಮುಖಂಡರ ಮನವಿ ಮೇರೆಗೆ ಉತ್ಖನನ ಜಾಗವನ್ನು ಯಥಾಸ್ಥಿತಿಗೆ ತರುವಲ್ಲಿ ಕಾಲವಕಾಶ ನೀಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಜು.16ರಂದು ಉದ್ಘಾಟನೆಯಾಗಿತ್ತು:
ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಜಂಟಿಯಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಂದಾಗಿತ್ತು. ಕಳೆದ ಜು.16ರಂದು ಉತ್ಖನನ ಕಾರ್ಯಕ್ರಮ ಉದ್ಘಾಟನೆಯಾಗಿತ್ತು. ಆ ಸಂದರ್ಭದಲ್ಲಿ ಮಳೆ ಕಾರಣದಿಂದ ಉತ್ಖನನ ಕಾರ್ಯ ಮುಂದೂಡಲಾಗಿತ್ತು. ನಂತರದಲ್ಲಿ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭಿಸಿತ್ತು. ಈಗಾಗಲೇ ಹಲವು ಐತಿಹಾಸಿನ ತಾಣಗಳಿಂದ ದೇಶದ ಗಮನ ಸೆಳೆದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಬೌದ್ಧರ ಇತಿಹಾಸದ ಗತವೈಭವವನ್ನು ಬೆಳೆಕಿಗೆ ತರುವ ಪ್ರಯತ್ನ ನಡೆದಿದೆ.
2500 ವರ್ಷಗಳ ಇತಿಹಾಸ:
ಸುಮಾರು 2500 ವರ್ಷಗಳ ಹಿಂದಿನ ಇತಿಹಾಸ ಕೆದಕುವ ಪ್ರಯತ್ನ ನಡೆದಿದೆ. 2004ರಲ್ಲಿ ಮೊದಲ ಬಾರಿಗೆ ಉತ್ಖನನಕ್ಕೆ ಚಾಲನೆ ನೀಡಲಾಯಿತು. ಆಗ ಕೆಲವೊಂದು ಭೌದ್ಧ ಪ್ರತಿಮೆಗಳು, ಸ್ಥೂಪಗಳು, ಚಿನ್ನದನಾಣ್ಯ, ಶಿವಲಿಂಗ. ಶಿಲಾಶಾಸನಗಳು ಸೇರಿ ಹಲವು ಪುರಾವೆಗಳು ಪತ್ತೆಯಾಗಿದ್ದವು. ಇಲಾಖೆ ಗುರುತಿಸಿರುವ ಜಾಗದಲ್ಲಿ ಬೌದ್ಧವಿಹಾರವಿರುವ ಬಗ್ಗೆ ಊಹಿಸಲಾಗಿದ್ದು, ಉತ್ಖನನ ಆರಂಭವಾದ ಬಳಿಕ ಹೊಸ ಅಚ್ಚರಿಗಳನ್ನು ಕಾಣಬಹುದು ಎಂಬ ವಿಶ್ವಾಸದೊಂದಿಗೆ ಅಧಿಕಾರಿಗಳು ಉತ್ಖನನ ಕಾರ್ಯಕ್ಕೆ ಮುಂದಾಗಿದ್ದರು, ನಿರೀಕ್ಷೆಯಂತೆಯೇ ಬಿಕ್ಷಾಪಾತ್ರೆ, ವಿಹಾರಗಳ ನಿರ್ಮಾಣಕ್ಕೆ ಬಳಸಿದ್ದ ಇಟ್ಟಿಗೆಗಳು, ಬೂದಿತುಂಬಿದ್ದ ಮಡಿಕೆಗಳು ಸೇರಿ ಹಲವು ಪುರಾವೆಗಳು ಪತ್ತೆಯಾಗಿದ್ದು, ಇಲಾಖೆಯ ಶ್ರಮಕ್ಕೆ ಲ ಸಿಕ್ಕಂತಾಗಿದೆ.
ಇಲಾಖೆಯಿಂದಲೂ ಪ್ರಯತ್ನ:
ಬೌದ್ಧ ಸಮುದಾಯದ ಮುಖಂಡರ ಮನವಿಯಂತೆ ಇಲಾಖೆಯೂ ಸಹ ಈ ಜಾಗವನ್ನು ರಕ್ಷಣೆ ಮಾಡಿ ಐತಿಹಾಸಿಕ ಕುರುಹು ಉಳಿಸುವ ಪ್ರಯತ್ನ ನಡೆಸಿದೆ. ಬೌದ್ಧ ಸಮುದಾಯದ ಮುಖಂಡರು ಈಗಾಗಲೇ ಗ್ರಾಮಾಂತರ ಜಿಲ್ಲಾಡಳಿತದ ಮೂಲಕ ಮಂತ್ರಿಗಳು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಉತ್ಖನನ ನಡೆಯುತ್ತಿರುವ ಸ್ಥಳವನ್ನು ಈ ಹಿಂದೆ ಬೂದಿಗುಡ್ಡ ಎಂದು ಕರೆಯುತ್ತಿದ್ದರು. ಗ್ರಾಮದಲ್ಲಿ ಇಂತಹ ಸ್ಥಳವಿರುವುದು ಹೆಮ್ಮೆ. ಈ ಸ್ಥಳವನ್ನು ಸರ್ಕಾರ ಅಭಿವೃದ್ಧಿ ಮಾಡಿ ಬೌದ್ಧ ಪ್ರವಾಸಿ ತಾಣವಾಗಿ ಮಾಡಿದರೆ ರಾಜಘಟ್ಟ ಗ್ರಾಮ ಪ್ರಮುಖ ಪ್ರವಾಸಿ ತಾಣವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net