ಪಶು ಆರೋಗ್ಯ ಕೇಂದ್ರಕ್ಕೆ ಸದಾ ಬೀಗ!

Animal Health Centre
Animal Health Centre
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಪಶು ಆರೋಗ್ಯ ಕೇಂದ್ರಕ್ಕೆ ಸದಾ ಬೀಗ ಬಿದ್ದಿರುತ್ತದೆ, ಯಾವಾಗ ನೋಡಿದರೂ ವೈದ್ಯರಿಲ್ಲ, ವೈದ್ಯರು ಹೊರಗಡೆ ಹೋಗಿದ್ದಾರೆ, ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತದೆ, ಇಲ್ಲಿನ ಅವ್ಯವಸ್ಥೆಯಿಂದ ನಾವೆಲ್ಲ ರೋಸಿ ಹೋಗಿದ್ದೇವೆ ಎಂದು ತೂಬಗೆರೆ ವ್ಯಾಪ್ತಿಯ ಹೈನುಗಾರರು ಆರೋಪಿಸಿದ್ದಾರೆ.
ರಾಗಿ ಪ್ರಧಾನವಾಗಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಹೈನುಗಾರಿಕೆಯೂ ಮುಂಚೂಣಿಯಲ್ಲಿದೆ, ದೊಡ್ಡಬಳ್ಳಾಪುರ ತಾಲೂಕುವೊಂದರಿಂದಲೇ 207 ಡೇರಿಗಳಿದ್ದು 8800 ಕ್ಕೂ ಹೆಚ್ಚು ಹೈನುಗಾರರಿದ್ದಾರೆ, ಪ್ರತಿನಿತ್ಯ 1.20 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ, ಹೈನುಗಾರಿಕೆ ನಂಬಿ ಸಾವಿರಾರು ಕುಟುಂಬ ಜೀವನ ನಡೆಸುತ್ತಿವೆ ಆದರೆ ಇಲ್ಲಿನ ಕೆಲವೊಂದು ಪಶು ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಹೈನುಗಾರರನ್ನು ಹೈರಾಣಾಗಿಸಿದೆ, ಇದರ ಪಟ್ಟಿಯಲ್ಲಿ ತೂಬಗೆರೆ ಪಶು ಆರೋಗ್ಯ ಕೇಂದ್ರವೂ ಸೇರಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸೇವೆ ಇದ್ದರೂ ಇಲ್ಲದಂತೆ:
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಪಶು ಆರೋಗ್ಯ ಕೇಂದ್ರ ಇದ್ದೂ ಸೇವೆ ಇಲ್ಲದಂತಾಗಿಸೆ.
ಈ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಅವಲಂಬಿತವಾಗಿದ್ದು, ಪಶು ಪಾಲನೆ ಜೀವನಾಧಾರವಾದ್ದರಿಂದ ಗ್ರಾಮದಲ್ಲಿ ಅನೇಕ ಪಶುಪಾಲಕರು ಆಸ್ಪತ್ರೆಯ ಸೇವೆಗೆ ಅವಲಂಬಿತರಾಗಿದ್ದಾರೆ ಆದರೆ, ಇಲ್ಲಿನ ಪಶು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಆಸ್ಪತ್ರೆಗೆ ಹಾಜರಾಗದ ಕಾರಣ ರೈತರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಸರ್ಕಾರ ನೀಡಿರುವ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ವೈದ್ಯಾಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವೆಂಬ ಅನುಮಾನ ಜನರಲ್ಲಿ ಮೂಡಿದೆ, ಆಸ್ಪತ್ರೆಯ ಶಿಸ್ತು ಸರ್ಕಾರದ ನಿಯಮ ಮತ್ತು ಪಶುಗಳ ಸೇವೆಯನ್ನು ಸಂಪೂರ್ಣವಾಗಿ ಲೆಕ್ಕಿಸಿದ ವರ್ತನೆ ಕಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಶು ಪಾಲನೆ ಜೀವನಧಾರವಾದರಿಂದ ಈ ಅಲಕ್ಷ್ಯ ಸಹನೀಯವಲ್ಲ, ಆದ್ದರಿಂದ ಇದನ್ನು ಮೇಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು ಎಂದು ಹೈನುಗಾರರು ಒತ್ತಾಯಿಸಿದ್ದಾರೆ.
ಗಂಭೀರವಾಗಿ ಪರಿಗಣಿಸಲಾಗುವುದು:
ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ತೂಬಗೆರೆ ವ್ಯಾಪ್ತಿಯಲ್ಲಿ ಬಹಳಷ್ಟು ಗ್ರಾಮಗಳಿದ್ದು ಸಾಕಷ್ಟು ಹೈನುಗಾರರಿದ್ದಾರೆ, ವೈದ್ಯರು ಹಾಗೂ ಸಿಬ್ಬಂದಿ ಹಲವು ವೇಳೆ ಕರ್ತವ್ಯದ ಮೇಲೆ ಹೊರಹೋಗಬೇಕಾಗಿರುತ್ತದೆ ಇದರಿಂದ ಕೆಲವು ಸಂದರ್ಭದಲ್ಲಿ ಇಂಥ ಸಮಸ್ಯೆ ಎದುರಾಗುತ್ತದೆ, ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆ ನೀಡಲಾಗುವುದು, ಈಗಾಗಲೇ ಹೊರಗುತ್ತಿಗೆ ಮೇಲೆ ಡಿ ಗ್ರೂಪ್ ನೌಕರನನ್ನೂ ನೇಮಿಸಲಾಗಿದೆ. ಇದರೊಂದಿಗೆ ಎಸ್‌ಎಸ್ ಘಾಟಿಯಲ್ಲಿ ಮತ್ತೊಂದು ಪಶು ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದ ಹಂತದಲ್ಲಿದೆ ಶೀಘ್ರದಲ್ಲಿಯೇ ಅನುಮೋದನೆಗೊಳ್ಳುವ ನಿರೀಕ್ಷೆ ಇದೆ ಇದರಿಂದ ತೂಬಗೆರೆ ಪಶು ಆರೋಗ್ಯ ಕೇಂದ್ರದ ಮೇಲಿನ ಒತ್ತಡವೂ ತಗ್ಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್‌ಕುಮಾರ್ ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದಿರುವುದು ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿಸುವುದು ಗಂಭೀರ ಸಮಸ್ಯೆಯಾಗಿದೆ ತುರ್ತು ಚಿಕಿತ್ಸೆಯ ಸಮಯದಲ್ಲಿಯೂ ವೈದ್ಯರನ್ನು ಸಂಪರ್ಕಿಸಲು ಪರದಾಡುವಂತಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಗಂಭೀರ ಕ್ರಮ ಕೈಗೊಳ್ಳಬೇಕು ಹೈನುಗಾರರ ನೆರವಿಗೆ ದಾವಿಸಬೇಕು.
ಕೃಷ್ಣಪ್ಪ, ದೊಡ್ಡಬಳ್ಳಾಪುರ ರೈತ
ಸೂಕ್ತ ಚಿಕಿತ್ಸೆ ಸಿಗದೆ, ವೈದ್ಯರು ಸಕಾಲದಲ್ಲಿ ಲಭ್ಯವಾಗದೆ ಅನೇಕ ಬಾರಿ ಬಹಳ ತೊಂದರೆ ಎದುರಾಗಿದೆ, ಆಸ್ಪತ್ರೆಯ ಬಾಗಿಲು ಮುಚ್ಚಿರುವ ಪರಿಣಾಮ ರೈತರು ಬೇರೆ ಕಡೆಗೆ ಸಹಾಯಕ್ಕಾಗಿ ಓಡಾಡುವ ಪರಿಸ್ಥಿತಿ ಎದುರಾಗಿದೆ ಇದರಿಂದ ಮೂಕ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಉಪಕಸುಬು ಜತೆಗೆ ಮುಖ್ಯ ಕಸುಬಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು
ರಾಮೇಗೌಡ, ಹೈನುಗಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net